|
English
|
ಇತ್ತೀಚಿನ ದಶಕಗಳಲ್ಲಿ ಆಧ್ಯಾತ್ಮಿಕರು ಆದರೆ ಆಸ್ತಿಕರಲ್ಲ (ಆಆಆ) ಎಂದು ಕರೆದುಕೊಳ್ಳುವ ಗುಂಪಿಗೆ ಸೇರಿದ ಜನರು ಒಮ್ಮಿಂದೊಮ್ಮೆಲೇ ಹೆಚ್ಚಾಗುತ್ತಿದ್ದಾರೆ. ನಮ್ಮ ಜುಲೈ, ೨೦೧೭ರ ಸಂಚಿಕೆಯಲ್ಲಿ ಲೇಖಕ ಲಾರೆನ್ ವ್ಯಾಲೆಂಟಿನೊ ಅಮೆರಿಕೆಯ ಶೇಕಡ ೨೦ರಷ್ಟು ಜನರು “ಆಆಆ” ಗುಂಪಿಗೆ ಸೇರಿದ್ದಾರೆಂದು ತಿಳಿಸುತ್ತಾರೆ. ಅತ್ಯಾಶ್ಚರ್ಯಕರವಾಗಿ ಅಮೆರಿಕೆಯ ತರುಣರಲ್ಲಿ ಶೇಕಡ ೬೨ರಷ್ಟು ಜನರು ತಾವು ಆಧ್ಯಾತ್ಮಿಕರು, ಆದರೆ ಆಸ್ತಿಕರಲ್ಲ ಎಂದು ಭಾವಿಸುತ್ತಾರೆ. ವಿಕಿಪೀಡಿಯ ನಿಷ್ಕೃಷ್ಟವಾಗಿ ಹೀಗೆಂದು ತಿಳಿಸುತ್ತದೆ: “ಆಧ್ಯಾತ್ಮಿಕ ಬೆಳವಣಿಗೆಯನ್ನು ಬೆಂಬಲಿಸಲು ಸುಸಂಘಟಿತ ಧರ್ಮ ಏಕಮಾತ್ರ ಅಥವಾ ಅತ್ಯಂತ ಅಮೂಲ್ಯ ಸಾಧನವೆಂಬ ಅಭಿಪ್ರಾಯವನ್ನು ಆಧ್ಯಾತ್ಮಿಕತೆಯ ದೃಷ್ಟಿಕೋನ ವಿವಾದಾಂಶವಾಗಿ ಪರಿಗಣಿಸುತ್ತದೆ. ಧಾರ್ಮಿಕತೆ ’ಮನಸ್ಸು-ಶರೀರ-ಆತ್ಮ’ ಗಳ ಯೋಗಕ್ಷೇಮಕ್ಕೆ ಪ್ರಾಧಾನ್ಯ ನೀಡುತ್ತದೆ. ಆದುದರಿಂದ, ತಾಯ್-ಚೀ, ರೇಕೀ ಮತ್ತು ಯೋಗಗಳಂಥ ಸಮಗ್ರತಾ ದೃಷ್ಟಿಯ ಕಾರ್ಯಕ್ರಮಗಳು ’ಆಆಆ’ ಚಳವಳಿಯಲ್ಲಿ ಸಾಮಾನ್ಯ.”
’ಆಆಆ’ದೊಡನೆ ಸಂಪರ್ಕ ಹೊಂದಲು ನಾನಾ ಕಾರಣಗಳಿರಬಹುದು. ಆದರೆ, ಸಾಮಾನ್ಯ ವರದಿಯ ಪ್ರಕಾರ, ಅವರ ಕುಟುಂಬದವರ ಧರ್ಮ- ಉನ್ನತ ಮಟ್ಟದ ಪ್ರಙ್ಞೆಯ, ಸ್ವಾಭಾವಿಕ ಧಾರ್ಮಿಕತೆಯ ಹಾಗೂ ಸರ್ವವ್ಯಾಪಿಯಾದ, ಒಲವಿನಿಂದ ಕೂಡಿದ ಪ್ರಙ್ಞೆಯಾಗಿ ಭಗವಂತನೊಡನೆ ಐಕ್ಯವಾಗುವುದರ ಅನುಭವ ಹೊಂದಲು ಬೇಕಾದ ಮಾರ್ಗದರ್ಶನ ನೀಡುವುದಿಲ್ಲ. ವಾಸ್ತವವಾಗಿ, ಧಾರ್ಮಿಕತೆಯ ಪರಿಸರದಲ್ಲಿಯೇ ಜನಿಸಿದವರು ಇಂಥ ಧ್ಯೇಯಕ್ಕೆ ಪ್ರಕಟವಾಗಿಯೇ ವಿರೋಧಿಯಾಗಿರುತ್ತಾರೆ. ಹೀಗಾಗಿ ಧಾರ್ಮಿಕತೆಯಲ್ಲಿ ಗಾಢವಾದ ಆಸಕ್ತಿ ಹೊಂದಿದವರು ಇಂಥ ಧರ್ಮಗಳೊಡನೆ ಸಂಬಂಧ ಹೊಂದದಿರುವುದು ಸಮಂಜಸವಾಗಿದೆ.
ವಾಸ್ತವ ಸಂಗತಿ ಏನೆಂದರೆ, ’ಆಆಆ’ ಎಂದು ಕರೆಯಲ್ಪಡುವ ಹತ್ತೊಂಬತ್ತು ದಶಲಕ್ಷ ಯುವ ಅಮೆರಿಕನ್ನರು ಅನೇಕ ಬಾರಿ ತಮಗೇ ಅರಿವಿಲ್ಲದೆ ಹಿಂದೂಧರ್ಮವನ್ನು ಹೋಲುವ ನಂಬಿಕೆ ಹಾಗೂ ಸಂಪ್ರದಾಯಗಳಿಗೆ ನಿಷ್ಠರಾಗಿದ್ದಾರೆ. ಭಾರತದ ಪ್ರಾಚೀನ ತತ್ತ್ವಗಳ ಬಗ್ಗೆ ಪಾಶ್ಚಿಮಾತ್ಯರು ಮರುಳಾಗಿರುವುದನ್ನು ಪರಿಗಣಿಸಿದಾಗ ಮತ್ತು ವಸ್ತುತಃ ಹಿಂದೂಧರ್ಮದಲ್ಲಿ ಧರ್ಮ ಹಾಗೂ ಆಧ್ಯಾತ್ಮಿಕತೆಗಳ ನಡುವೆ ವಾಸ್ತವಿಕವಾಗಿ ಯಾವುದೇ ವಿಭಜನೆ ಇಲ್ಲದಿರುವುದರಿಂದ ಇದು ಅಚ್ಚರಿಯನ್ನು ಉಂಟುಮಾಡಬೇಕಾಗಿಲ್ಲ.
ಹಿಂದೂಧರ್ಮ ತನ್ನದೇ ಆದ ಯುವ ’ಆಆಆ’ರ ಬೆಳೆಯುತ್ತಿರುವ ಗುಂಪನ್ನು ಹೊಂದಿದೆ. ನಾನು ಇಪ್ಪತ್ತರ ಹರೆಯದಲ್ಲಿರುವ ಕೆಲವರನ್ನು ಭೇಟಿಯಾಗಿದ್ದೇನೆ. ಹಿಂದೂಧರ್ಮ ತನ್ನೊಳಗೆ ಹಲವಾರು ಆಧ್ಯಾತ್ಮಿಕ ಪಥಗಳನ್ನು ಹೊಂದಿದೆ ಎಂಬುದನ್ನು ಅವರು ಅರ್ಥಮಾಡಿಕೊಂಡಿದ್ದಾರೆ, ಆದರೆ ಹಿಂದೂ ದೇವಾಲಯಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರಿಂದ ತಮಗೆ ಯಾವ ಪ್ರಯೋಜನವೂ ಇರುವಂತೆ ಕಾಣುವುದಿಲ್ಲವೆಂಬ ಕಾರಣಕ್ಕಾಗಿ ಅವುಗಳಲ್ಲಿ ಭಾಗವಹಿಸುವುದಿಲ್ಲವೆಂದು ಅವರು ತೀರ್ಮಾನಿಸಿದ್ದಾರೆ. ತಾವು ಆಧ್ಯಾತ್ಮಿಕ ವ್ಯಕ್ತಿಯಾಗಬೇಕೆಂದು ಅವರು ಈಗಲೂ ಮನಸಾರೆ ಆಶಿಸುತ್ತಾರೆ. ಅನುಕೂಲಸ್ಥರೊಬ್ಬರ ಮನೆಯಲ್ಲಿ ಸತ್ಸಂಗ ನಡೆಯುತ್ತಿದ್ದಾಗ, ಯುವಕನೊಬ್ಬ, “ನನಗೆ ದೇವಾಲಯಕ್ಕೆ ಹೋಗಲು ಇಷ್ಟವಿಲ್ಲ, ಆದುದರಿಂದ ಹೋಗುವುದಿಲ್ಲ. ಇದು ಸರಿಯೇ?” ಎಂದು ಕೇಳಿದ. ನಾನು ಅವನಿಗೆ , “ಹೌದು, ಅದು ಸರಿ” ಎಂದು ತಿಳಿಸಿದೆ. ನನ್ನ ಗುರುಗಳಂತೆ ನಾನೂ ಹಿಂದೂಗಳು ವಾರಕ್ಕೊಮ್ಮೆ ದೇವಾಲಯಕ್ಕೆ ಹೋಗಲು ಪ್ರೋತ್ಸಾಹ ನೀಡುತ್ತೇನೆ. ಆದರೆ ಹಲವಾರು ಒಳ್ಳೆಯ ಹಿಂದೂಗಳು ಹಾಗೆ ಮಾಡುವುದಿಲ್ಲ. ಆಲಯದಲ್ಲಿ ಆರಾಧಿಸುವುದರಿಂದ ಮಾತ್ರವೇ ಆಧ್ಯಾತ್ಮಿಕ ಮಾರ್ಗವನ್ನು ಅನುಸರಿಸಬಹುದು ಎಂದು ನಮ್ಮ ಧರ್ಮ ತಿಳಿಸುವುದಿಲ್ಲ. ನನ್ನ ಗುರು, ಸದ್ಗುರು ಶಿವಾಯ ಸುಬ್ರಮುನಿಯಸ್ವಾಮಿ, ಈ ಪ್ರಶ್ನೆಗೆ ತೀಕ್ಷ್ಣವಾದ ಉತ್ತರವನ್ನು ನೀಡಿದ್ದಾರೆ: “ಹಿಂದೂಧರ್ಮ ಸಿದ್ಧಾಂತಕ್ಕಿಂತಲೂ ಮಿಗಿಲಾಗಿ ಅನುಭವದ ಧರ್ಮವಾಗಿದೆ. ಅದು ತನ್ನ ಹಿಂಬಾಲಕರಿಗೆ, ’ಇದು ಸತ್ಯದ ಸ್ವಭಾವ, ಈ ಮಾರ್ಗವನ್ನು ಅನುಸರಿಸುವುದರಿಂದ ಸತ್ಯದ ಸಾಕ್ಷಾತ್ಕಾರ ಹೊಂದಬಹುದು. ಇಲ್ಲಿ ಸಂಪ್ರದಾಯಗಳು ಕಾಲವನ್ನು ಮೆಟ್ಟಿ ನಿಂತು, ಅತ್ಯಂತ ಪರಿಣಾಮಕಾರಿ ಎಂದು ಸಾಬೀತಾಗಿವೆ. ಈಗ ಅವುಗಳನ್ನು ನಿಮ್ಮ ಬದುಕಿನಲ್ಲಿಯೇ ಒರೆಹಚ್ಚಿ ನೋಡಿ, ನೀವೇ ಪ್ರಮಾಣೀಕರಿಸಿಕೊಳ್ಳಬಹುದು. ನಮ್ಮಿಂದಾದ ಸಹಾಯವನ್ನು ನಾವು ನೀಡುತ್ತೇವೆ.’ ಎಂದು ತಿಳಿಸಲು ಇಚ್ಛಿಸುತ್ತದೆ. ಹಿಂದೂಧರ್ಮ ಎಂದಿಗೂ, ’ನೀವು ಹೀಗೆಯೇ ಮಾಡಬೇಕು ಅಥವಾ ನಂಬಬೇಕು; ಇಲ್ಲವಾದರೆ ಶಿಕ್ಷೆಗೆ ಗುರಿಯಾಗುತ್ತೀರಿ’ ಎಂದು ಹೇಳುವುದಿಲ್ಲ.”
ಈ ಜೀವಾವಧಿಯಲ್ಲಿಯೇ ಹಿಂದೂ ಮಾರ್ಗದಿಂದ ಆಧ್ಯಾತ್ಮಿಕ ಪ್ರಗತಿ ಸಾಧಿಸಬೇಕೆಂದು ಹಂಬಲಿಸುತ್ತಿರುವ ’ಆಆಆ’ರಿಗೆ ನಾನು ಐದು ಸೂಚನೆಗಳನ್ನು ನೀಡುತ್ತೇನೆ.
೧. ಉಳಿದಿರುವ ಆಧ್ಯಾತ್ಮಿಕ ಸಾಹಿತ್ಯದ ಅಭ್ಯಾಸ ಮಾಡಿ.
ಸಾಧಾರಣವಾಗಿ ’ಆಆಆ’ದವರು ಹಿಂದೆ ಬೇರೆಯವರು ಅನುಭವಿಸಿ ಬರೆದಿರುವುದರ ಅಧ್ಯಯನ ಮಾಡದೆ, ಒಬ್ಬಂಟಿಯಾಗಿ ಸಾಗುತ್ತಾರೆ. ಈ ತಂತ್ರವನ್ನು ಬಳಸದಂತೆ ನಾನು ಸಲಹೆ ನೀಡುತ್ತೇನೆ. ಜ್ಞಾನದ ಬೇರೆ ಯಾವುದೇ ಕ್ಷೇತ್ರದಂತೆ ಧಾರ್ಮಿಕತೆಯೂ ಒಂದು ಕ್ಷೇತ್ರ. ಎಲ್ಲವನ್ನೂ ನಾವೇ ಗ್ರಹಿಸಲು ಪ್ರಯತ್ನಿಸುವುದಕ್ಕಿಂತ, ಬೇರೆಯವರು ಸಾಧಿಸಿರುವುದನ್ನು ಅರ್ಥಮಾಡಿಕೊಂಡು, ಅದರ ಪ್ರಯೋಜನ ಪಡೆದುಕೊಂಡರೆ ನಾವು ಹೆಚ್ಚಿನ ಪ್ರಗತಿ ಪಡೆಯಬಹುದು. ನನ್ನ ಗುರುಗಳು ಹಿಂದೂ ತತ್ತ್ವಗಳನ್ನು ಆಳವಾಗಿ ಪರಿಶೋಧಿಸಿ, “ಹಿಂದೂಧರ್ಮದ ಧಾರ್ಮಿಕ ಜ್ಞಾನಭಂಡಾರ ಎಷ್ಟೆಂಬುದನ್ನು ಅಂದಾಜು ಮಾಡಲಾಗುವುದಿಲ್ಲ. ನನಗೆ ತಿಳಿದಂತೆ ಅದಕ್ಕೆ ಸಮನಾದುದು ಬೇರೊಂದಿಲ್ಲ. ಸಂಪೂರ್ಣ ಯೋಗ ಸಿದ್ಧಾಂತ, ಧ್ಯಾನ ಹಾಗೂ ಚಿಂತನ, ಮತ್ತು ಆತ್ಮಸಾಕ್ಷಾತ್ಕಾರಗಳನ್ನು ಅದು ಒಳಗೊಂಡಿದೆ. ಬೇರೆಲ್ಲೂ ಮಾನವನ ಆಂತರಿಕ ಶರೀರಗಳ, ಸೂಕ್ಷ್ಮ ಪ್ರಾಣಗಳು ಮತ್ತು ಚಕ್ರಗಳು ಅಥವಾ ನರಮಂಡಲದ ಒಳಗಿನ ಅತೀಂದ್ರಿಯ ಜ್ಞಾನ ಕೇಂದ್ರಗಳ ಬಗ್ಗೆ ಇಂಥ ಸೂಕ್ಷ್ಮದೃಷ್ಟಿಯ ಜ್ಞಾನ ದೊರೆಯುವುದಿಲ್ಲ. ಮಾನವನ ಎಚ್ಚರಗೊಂಡ ಆಂತರಿಕ ಪ್ರಜ್ಞೆಯನ್ನು ಆವರಿಸಿಕೊಳ್ಳುವ ನಿರ್ಮಲವಾದ ಬಿಳಿಯ ಬೆಳಕಿನಿಂದ ಹಿಡಿದು ದೃಶ್ಯಗಳು ಹಾಗೂ ಧ್ವನಿಗಳವರೆಗೆ ಮಾನವಾತೀತಪ್ರಜ್ಞೆಯ ಆಂತರಿಕ ಸ್ಠಿತಿಗಳನ್ನು ಹಿಂದೂಧರ್ಮದಲ್ಲಿ ಸಂಪೂರ್ಣವಾಗಿ ಪರಿಶೋಧಿಸಿ, ವಿವರಿಸಲಾಗಿದೆ” ಎಂದು ತಿಳಿಸಿದ್ದಾರೆ. ಈ ಅಮೂಲ್ಯ ನಿಧಿಯನ್ನು ನಿರ್ಲಕ್ಷಿಸಿದರೆ ನಾವು ಮಾಡಬಹುದಾದ ಆಧ್ಯಾತ್ಮಿಕ ಪ್ರಗತಿ ಖಂಡಿತವಾಗಿಯೂ ಕುಂಠಿತಗೊಳ್ಳುತ್ತದೆ.
೨. ಒಂದು ಸಂಪ್ರದಾಯವನ್ನು ಆರಿಸಿಕೊಂಡು ಅದಕ್ಕೆ ನಿಷ್ಠರಾಗಿರಿ.
ಆಧ್ಯಾತ್ಮಿಕ ಸಾಹಿತ್ಯವನ್ನು ಅಭ್ಯಾಸಮಾಡಿದನಂತರ ಒಂದು ಪದ್ಧತಿಯನ್ನು ಆರಿಸಿಕೊಂಡು, ಅದನ್ನು ದೃಢನಿಶ್ಚಯದಿಂದ ಅನುಸರಿಸಿ. ಇದನ್ನು ನಾವು ಭಾರತೀಯ ಸಾಂಪ್ರದಾಯಿಕ ನೃತ್ಯವನ್ನು ಕಲಿಯುವುದಕ್ಕೆ ಹೋಲಿಸಬಹುದು. ಭಾರತೀಯ ನೃತ್ಯ ಪದ್ಧತಿಯಲ್ಲಿ ಸಾಮಾನ್ಯವಾಗಿ ಭರತನಾಟ್ಯ, ಕಥಕ್, ಕೂಚಿಪುಡಿ, ಓಡಿಸ್ಸಿ, ಕಥಕ್ಕಳಿ, ಸಾತ್ತ್ರೀಯ, ಮಣಿಪುರಿ, ಹಾಗೂ ಮೋಹಿನಿ ಅಟ್ಟಮ್ ಎಂಬ ಎಂಟು ಪ್ರಭೇದಗಳನ್ನು ಪರಿಗಣಿಸಲಾಗುತ್ತದೆ. ನೃತ್ಯವನ್ನು ಕಲಿಯಲು ಆಶಿಸುವ ವಿದ್ಯಾರ್ಥಿ ಒಮ್ಮೆಗೇ ಎರಡು, ಮೂರು ಅಥವಾ ನಾಲ್ಕು ಪ್ರಭೇದಗಳಲ್ಲಿ ಕೈ ಆಡಿಸುವುದಕ್ಕಿಂತ ಒಂದು ಪ್ರಭೇದವನ್ನು ಆರಿಸಿಕೊಂಡು ಅದನ್ನೇ ಅನುಸರಿಸಿದರೆ ಹೆಚ್ಚಿನ ಪ್ರಗತಿ ಹೊಂದಲು ಸಾಧ್ಯ.
೩. ಅರ್ಹರಾದ ಶಿಕ್ಷಕರ ಬಳಿ ವ್ಯಾಸಂಗ ನಡೆಸಿ.
ನೀವು ಆರಿಸಿಕೊಂಡಿರುವ ಪ್ರಭೇದದಲ್ಲಿ ನುರಿತ ಗುರುವನ್ನು ಆರಿಸಿಕೊಳ್ಳಿ ಎನ್ನುವುದೇ ನನ್ನ ಮೂರನೆಯ ಸೂಚನೆ. ನನಗೆ ಯಾರಾದರೂ, “ಗುರು ಅಗತ್ಯವೇ?” ಎಂದು ಕೇಳಿದರೆ, ನಾನು ಹಲವು ಸಂದರ್ಭಗಳಲ್ಲಿ, “ಭಕ್ತಿಗೀತೆಗಳನ್ನು ಹಾಡಲು ನಿಮಗೆ ಗುರು ಬೇಕೇ?” ಎಂದು ಕೇಳುತ್ತೇನೆ. ಅನಂತರ, “ಸರಳವಾದ ಭಕ್ತಿಗೀತೆಗಳನ್ನು, ಭಜನೆಗಳನ್ನು ಗುರುವಿನ ನೆರವಿಲ್ಲದೆಯೇ ಕಲಿಯಬಹುದು. ಆದರೆ, ಹೆಚ್ಚು ಕಷ್ಟಕರವಾದ ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ಪೂರ್ಣ ಕೌಶಲ ಪಡೆಯಬೇಕಾದರೆ, ಗುರು ಖಂಡಿತ ಬೇಕು” ಎಂದು ವಿವರಿಸುತ್ತೇನೆ. ಆರೋಗ್ಯಕರವಾದ ಆಹಾರಕ್ರಮವನ್ನು ಅನುಸರಿಸುವುದರಿಂದ, ಧ್ಯಾನ ಮಾಡುವುದರಿಂದ, ನಿಯತವಾಗಿ ಆರಾಧಿಸುವುದರಿಂದ ಹಾಗೂ ಶಾಸ್ತ್ರಗಳ ಅಧ್ಯಯನದಿಂದ ಯಾರ ನೆರವೂ ಇಲ್ಲದೆ ಆಧ್ಯಾತ್ಮಿಕ ಪ್ರಗತಿಯನ್ನು ಸಾಧಿಸಬಹುದು. ಆದರೆ ನಿಮ್ಮ ಜೀವಿತಾವಧಿಯಲ್ಲಿ ನಿಮ್ಮ ಪ್ರಗತಿಯನ್ನು ಗರಿಷ್ಠೀಕರಿಸಲು ನಿಮಗೆ ಗುರು ಬೇಕು. ಗುರುವಿನಿಂದ ನಿಮಗೆ ಈ ಐದು ಪ್ರಯೋಜನಗಳಿವೆ.
ಮೊದಲನೆಯದಾಗಿ, ಗುರು ಕಷ್ಟಕಾಲದಲ್ಲೂ ನಿಮಗೆ ಪರಿಶ್ರಮ ಪಟ್ಟು ಮುಂದುವರಿಯಲು ಪ್ರೋತ್ಸಾಹ ನೀಡುತ್ತಾರೆ. ಅವರಿಲ್ಲದೆ ನಾವು ಏನನ್ನು ಸಾಧಿಸಬಹುದೋ ಅದಕ್ಕಿಂತ ಹೆಚ್ಚಿನದನ್ನು ಸಾಧಿಸಲು ಅವರು ನಮ್ಮ ಮಾರ್ಗದರ್ಶಕರಾಗಿ ನೆರವಾಗುತ್ತಾರೆ.
ಎರಡನೆಯದಾಗಿ, ಗುರು ನಮಗೆ ಆಧ್ಯಾತ್ಮಿಕ ಆತ್ಮ-ಜ್ಞಾನ ಬೆಳಸಿಕೊಳ್ಳಲು ನೆರವಾಗುತ್ತಾರೆ. ನಾವು ಅವರಲ್ಲಿಗೆ ಆತ್ಮಸಂಶಯದೊಡನೆ ಅಥವಾ ದುರಭಿಮಾನದೊಡನೆ ಹೋದರೂ, ಅದನ್ನು ಮೀರಿ ನಮ್ಮ ದೈವಿಕತೆಯನ್ನು ಗುರುತಿಸಿಕೊಳ್ಳಲು ಗುರು ನಮಗೆ ನೆರವಾಗುತ್ತಾರೆ.
ಮೂರನೆಯದಾಗಿ, ಗುರು ಪ್ರಾಚೀನ ಸತ್ಯಗಳನ್ನು ಶ್ರುತಪಡಿಸಿ, ನಾವು ಗ್ರಂಥಗಳನ್ನು ಓದಿ ಹೊಂದುವ ತಿಳಿವಳಿಕೆಯನ್ನು ಮೀರಿಸುವ ಮೂರ್ತರೂಪದ, ಯಥಾವತ್ತಾದ ಗ್ರಹಣಶಕ್ತಿಯನ್ನು ದಯಪಾಲಿಸುತ್ತಾರೆ.
ನಾಲ್ಕನೆಯದಾಗಿ ನಾವು ಯಾವುದರಲ್ಲಾದರೂ ದುರ್ಬಲರಾಗಿದ್ದರೆ, ಅದರ ಮೇಲೆ ಗಮನವನ್ನು ಕೇಂದ್ರೀಕರಿಸಿ, ನಾವು ಹೇಗೆ ನಡೆದುಕೊಳ್ಳಬೇಕು, ವಿಶ್ವದೊಡನೆ ಹೇಗೆ ಸಂಬಂಧ ಹೊಂದಿರಬೇಕು ಎನ್ನುವುದರ ಬಗ್ಗೆ ಮಾರ್ಗದರ್ಶನ ಸೂತ್ರಗಳನ್ನು ದಯಪಾಲಿಸಿ, ನಮ್ಮ ನಡವಳಿಕೆ ಸುಧಾರಿಸಲು ನೆರವಾಗುತ್ತಾರೆ.
ಐದನೆಯದಾಗಿ, ಪ್ರಗತಿಪರ ವಿದ್ಯಾರ್ಥಿಗೆ ದೀಕ್ಷೆ ಎನ್ನುವ ಉಪದೇಶ ನೀಡಿ, ಅದರಿಂದ ಶೀಘ್ರ ವಿಕಾಸ ಹೊಂದಿ, ಬದುಕಿನಲ್ಲಿ ದೈವೀ ಅನುಗ್ರಹ ಪಡೆಯಲು ನೆರವಾಗುತ್ತಾರೆ.
೪. ಪ್ರತಿನಿತ್ಯವೂ ಅಭ್ಯಾಸ ಮಾಡಿ.
“ಒಳ್ಳೆಯ ನರ್ತಕ/ಕಿ ಆಗಲು ಬೇಕಾದ ವಿಶಿಷ್ಟ ಗುಣ ಏನೆಂಬುದನ್ನು ತಿಳಿಸಿಬಲ್ಲಿರಾ?” ಈ ಪ್ರಶ್ನೆಗೆ ಒಂದು ಪದದ ಉತ್ತರವೇನು?” ಈ ಪ್ರಶ್ನೆಯ ಉತ್ತರ ಎಲ್ಲರಿಗೂ ತಿಳಿದಿದೆ: ಅಭ್ಯಾಸ! ಅತ್ಯುತ್ತಮ ನರ್ತಕ/ಕಿ ಆಗಲು ಪ್ರತಿನಿತ್ಯವೂ ಅಭ್ಯಾಸ ಮಾಡಬೇಕು. ಮೋಕ್ಷ ಹೊಂದಲು ನಡೆಸುವ ಆಧ್ಯಾತ್ಮಿಕ ಪಯಣಕ್ಕೂ ಇದು ಅನ್ವಯಿಸುತ್ತದೆ. ನಾವು ಪ್ರತಿನಿತ್ಯವೂ ದೃಢಚಿತ್ತದಿಂದ ಅಭ್ಯಾಸ ಮಾಡುತ್ತ ಮುಂದೆ ಸಾಗಬೇಕು.
ಪ್ರಾಮಾಣಿಕವಾಗಿ ಈ ಮಾರ್ಗದಲ್ಲಿ ಸಾಗಬೇಕೆಂದು ಆಶಿಸುವವರಿಗೆ ಮನೆಯಲ್ಲಿ, ಸಾಧ್ಯವಾದರೆ ಪವಿತ್ರ ಕಾರ್ಯಗಳಿಗೆ ಮಾತ್ರವೇ ಬಳಸುವ ಪ್ರತ್ಯೇಕ ಕೊಠಡಿಯೊಂದರಲ್ಲಿ ಪೂಜಾಮಂದಿರವೊಂದನ್ನು ಸ್ಠಾಪಿಸಿಕೊಳ್ಳಲು ಉತ್ತೇಜನ ನೀಡುತ್ತೇನೆ. ಈ ಕೊಠಡಿಯನ್ನು ನಿಮ್ಮ ಆಶ್ರಯತಾಣವನ್ನಾಗಿ, ನಿಮ್ಮ ಅಂತರಂಗದ ಮಹಾದ್ವಾರವನ್ನಾಗಿ, ಆಧ್ಯಾತ್ಮಿಕ ಅಧ್ಯಯನ, ಸ್ತೋತ್ರ, ಗಾಯನ, ಜಪ, ಧ್ಯಾನ ಹಾಗೂ ಆರಾಧನೆಯ ಸ್ಠಳವನ್ನಾಗಿ ಮಾಡಿಕೊಳ್ಳಿ. ಪ್ರತಿದಿನವೂ ಕೇವಲ ಹತ್ತೇ ನಿಮಿಷಗಳ ಮಟ್ಟಿಗೇ ಆದರೂ ಇದನ್ನು ಮಾಡಿ. ಇದನ್ನು ಪ್ರತಿ ದಿನ ಬೆಳಗಿನ ವೇಳೆ ಅರ್ಧ ಗಂಟೆ ನಡೆಸುವುದು ಅತ್ಯುತ್ತಮ.
೫. ಭಕ್ತಿಯನ್ನು ಬೆಳೆಸಿಕೊಳ್ಳಿ.
ಧರ್ಮದ ಕಲ್ಪನೆಯಿಂದ ಮುಜುಗರ ಪಡುವವರಿಗೆ, ದೇವಾಲಯ, ಚರ್ಚು ಅಥವಾ ಬೇರಾವುದೇ ಧರ್ಮದ ಕಟ್ಟಡದಲ್ಲಿ ನಡೆಸಲಾಗುವ ಸಾಂಪ್ರದಾಯಿಕ ಧಾರ್ಮಿಕ ಆಚರಣೆ ಹಾಗೂ ಧರ್ಮಶ್ರದ್ಧೆಯ ಬಗ್ಗೆ ನಿಮ್ಮ ಕಲ್ಪನೆ — ಭಗವಂತನ ಬಗ್ಗೆ ನಿಮ್ಮ ವೈಯಕ್ತಿಕ ಭಕ್ತಿ (ಈ ಪವಿತ್ರ ಭಾವನೆಯನ್ನು ನೀವು ಹೇಗೆ ಬೇಕಾದರೂ ವಿಶದೀಕರಿಸಿ)ಯ ನಡುವೆ ಇರುವ ವ್ಯತ್ಯಾಸವನ್ನು ತಿಳಿದುಕೊಳ್ಳುವುದು ಮುಖ್ಯವೆಂದು ಹೇಳುತ್ತೇನೆ. ಸ್ಥೂಲವಾದ ಅರ್ಥದಲ್ಲಿ ಭಕ್ತಿ ಎಂದರೆ ಸಮಸ್ತ ಅಸ್ತಿತ್ವದ ಬಗ್ಗೆ ಪೂಜ್ಯಭಾವನೆ , ಸ್ಥಿರವಾದ ಮನ್ನಣೆ, ಶ್ರದ್ಧೆ ಹಾಗೂ ಗೌರವಾದರ. ನನ್ನ ಗುರುದೇವರು “ನಿಮ್ಮ ಶರೀರದಲ್ಲಿ ಭಕ್ತಿಯ, ಪ್ರೇಮದ ಚೇತನ ಹರಿಯುತ್ತಿರುವಾಗ, ಧ್ಯಾನ ಮಾಡುವುದು ಸುಲಭ. …ಭಕ್ತಿಯ ಅನುಭವ ಪ್ರಾಣಗಳನ್ನು ಕೆಳಗಿನ ಚಕ್ರಗಳಿಂದ ಮೇಲಿನ ಚಕ್ರಗಳಿಗೆ ಕೊಂಡೊಯ್ಯುತ್ತದೆ” ಎಂದು ವಿವರಿಸಿದ್ದಾರೆ.
ಆಧ್ಯಾತ್ಮಿಕ ಶಿಕ್ಷಣದ ಹಲವು ಸಂಪ್ರದಾಯಗಳಲ್ಲಿ ಭಕ್ತಿ ಪ್ರಮುಖ ಪಾತ್ರ ವಹಿಸುತ್ತದೆ. ಉದಾಹರಣೆಗೆ, ಪತಂಜಲಿಯ ಶಾಸ್ತ್ರೀಯ ಯೋಗದಲ್ಲಿ, ಭಗವಂತನಲ್ಲಿ ಭಕ್ತಿಯನ್ನು ಬೆಳೆಸಿಕೊಳ್ಳುವುದಕ್ಕೆ ಈಶ್ವರ ಪ್ರಣಿಧಾನವೆಂದು ಹೆಸರು. ಇದು ತಪ್ಪಾದ ಸಂವೇದನೆಯನ್ನು ಗೆದ್ದು, ಧ್ಯಾನದ ಅತ್ಯಂತ ಆಳವಾದ ಸ್ತರವನ್ನು ತಲಪುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮನೆಯಲ್ಲಿ ಗಾಯನ, ಸ್ತೋತ್ರ ಹಾಗೂ ಧರ್ಮನಿಷ್ಠೆಯ ವ್ರತಾಚರಣೆಗಳ ಮೂಲಕ ಸ್ವಂತವಾಗಿ ದೇವರಲ್ಲಿ ಭಕ್ತಿಯನ್ನು ಬೆಳೆಸಿಕೊಳ್ಳುವುದು ಹಿಂದೂಧರ್ಮದಲ್ಲಿ ಸಾಧ್ಯ. ಇವುಗಳನ್ನು ಬೇರೆ ಭಕ್ತರೊಡನೆ ಹಂಚಿಕೊಂಡು ಬಲಪಡಿಸಿಕೊಳ್ಳಬಹುದು. ಈ ಅನುಷ್ಠಾನಗಳನ್ನು ದೇವಾಲಯಕ್ಕೆ ಹೋಗಿಯೇ ಮಾಡಬೇಕೆಂಬ ಅಗತ್ಯವೇನೂ ಇಲ್ಲ.
ಉಪಸಂಹಾರ
’ಆಆಆ’ರಿಗೆ ಇರುವ ಸವಾಲೆಂದರೆ ಸಾಂಪ್ರದಾಯಿಕ ಮಾರ್ಗದರ್ಶನವಿಲ್ಲದೆ ಗಮನಾರ್ಹವಾದ ಆಧ್ಯಾತ್ಮಿಕ ಸಾಧನೆ ನಡೆಸುವುದು. ಪ್ರಮಾಣೀಕರಿಸಲ್ಪಟ್ಟ ಆಧ್ಯಾತ್ಮಿಕ ಮಾರ್ಗದ ಮೇಲೆ ಆಧಾರಿತವಾಗಿರುವ ನಿಮ್ಮದೇ ನಿಯಮಬದ್ಧವಾದ ಮಾರ್ಗವನ್ನು ಕಂಡುಕೊಳ್ಳುವುದು ಅತ್ಯಂತ ಮುಖ್ಯವಾದುದು. ನೆನಪಿರಲಿ, ಪಯಣದ ಆನಂದವನ್ನು ಅನುಭವಿಸಲು ಮರೆಯದಿರಿ!