ದೇವನೊಬ್ಬ, ನಾಮ ಹಲವು

ಸದ್ಗುರು ಬೋಧಿನಾಥ ವೇಲನ್‍ಸ್ವಾಮಿ


ಇತ್ತೀಚೆಗೆ ನಾನು ಲಂಡನ್ನಿನಲ್ಲಿರುವ ಎನ್ ಫೀಲ್ಡ್ ನಾಗಪೂಶನಿ ಅಂಬಾಳ್(ಅಂಬಿಕೆ)ಳ ದೇವಸ್ಥಾನದ ಮಹಾ ಕುಂಭಾಭಿಷೇಕದ ಸಂದರ್ಭದಲ್ಲಿ ಉಪನ್ಯಾಸ ಮಾಡಿದೆ. ಆ ಸಂದರ್ಭದಲ್ಲಿ ನೆರೆದಿದ್ದ ಅನೇಕರು ಹಿಂದೂಧರ್ಮಕ್ಕೆ ಹೊಸಬರಾಗಿದ್ದರಿಂದ, ನಾನು ಅವರಿಗೆ ದೇವಾಲಯದ ಬಗ್ಗೆ ಪ್ರಾಥಮಿಕ ಪರಿಚಯ ನೀಡಿದೆ. ಆ ನನ್ನ ಸಂದೇಶ ಇಲ್ಲಿದೆ.


ಹಿಂದೂ ದೇವಾಲಯಕ್ಕೆ ಪ್ರಥಮ ಬಾರಿಗೆ ಭೇಟಿ ಕೊಟ್ಟಾಗ, ಯಾರಿಗೇ ಆದರೂ ಹಿಂದೂಧರ್ಮದಲ್ಲಿ ಅನೇಕ ದೇವರುಗಳು ಇದ್ದಾರೆಂಬ ಭಾವನೆ ಸುಲಭವಾಗಿ ಮೂಡಬಹುದು. ಹಲವಾರು ದೇವಾಲಯಗಳು ಹಾಗೂ ಪವಿತ್ರ ಶಿಲ್ಪಗಳನ್ನು ಪ್ರಥಮ ಬಾರಿ ನೋಡಿದಾಗ ಅಂಥ ಕಲ್ಪನೆ ಮೂಡುವುದು ಸ್ವಾಭಾವಿಕ. ಆದರೆ ಅದು ಸರಿಯಲ್ಲ. ಹಿಂದೂ ಧರ್ಮದವರು ಹಲವಾರು ದೇವರುಗಳನ್ನು ನಂಬಿದರೂ, ಎಲ್ಲರೂ ಪರಮಾತ್ಮ ಒಬ್ಬನೇ ಎಂದೇ ನಂಬುತ್ತಾರೆ. ಈ ಭಾವನೆಯನ್ನು ವ್ಯಕ್ತಪಡಿಸುವ ಅತ್ಯಂತ ಪ್ರಾಚೀನವಾದ ಹಿಂದೂ ಧರ್ಮಗ್ರಂಥ ಋಗ್ವೇದದ ಉಲ್ಲೇಖವನ್ನು ಪದೇಪದೇ ಮಾಡಲಾಗುತ್ತದೆ. ಸಂಸ್ಕೃತದಲ್ಲಿ ಅದನ್ನು, “ಏಕಂ ಸತ್, ವಿಪ್ರಾಃ ಬಹುಧಾ ವದಂತಿ” ಎಂದು ಹೇಳುತ್ತಾರೆ; ಆಂಗ್ಲದಲ್ಲಿ, “ಸತ್ಯ ಒಂದೇ. ಙ್ಞಾನಿಗಳು ಅದನ್ನು ನಾನಾ ರೀತಿಯಲ್ಲಿ ವಿವರಿಸುತ್ತಾರೆ” ಎಂದು ಹೇಳುತ್ತಾರೆ.

ಹಿಂದೂ ದೇವಾಲಯದಲ್ಲಿ ಭಗವಂತನಿಗೆ ಒಂದಕ್ಕಿಂತ ಹೆಚ್ಚು ಗರ್ಭಗುಡಿಗಳಿರುವುದು ಅಸಾಮಾನ್ಯ ಸಂಗತಿಯಲ್ಲ. ಈ ಗರ್ಭಗುಡಿಗಳಲ್ಲಿ ದೇವರನ್ನು ಪುರುಷ, ಸ್ತ್ರೀ, ಪುರುಷ ಹಾಗೂ ಸ್ತ್ರೀ ಇಬ್ಬರೂ ಒಂದೇ ರೂಪನ್ನು ತಳೆದಿರುವಂತೆ, ನರ್ತಿಸುತ್ತಿರುವಂತೆ, ಆಶೀರ್ವದಿಸುವಂತೆ – ಹೀಗೆ ನಾನಾ ರೀತಿಯಲ್ಲಿ ರೂಪಿಸಿರುತ್ತಾರೆ. ಎನ್ ಫೀಲ್ಡ್ ದೇವಾಲಯದ ಪ್ರಧಾನ ಗರ್ಭಗುಡಿಯಲ್ಲಿ ಶ್ರೀಲಂಕೆಯ ಉತ್ತರ ಪರ್ಯಾಯ ದ್ವೀಪಕ್ಕೆ ಸನಿಹದಲ್ಲಿರುವ ನೈನಾದ್ವೀಪದ ಸಂಪ್ರದಾಯದಂತೆ ಭಗವಂತನನ್ನು ದೇವಿ ನಾಗಪೂಶನಿ ಅಂಬಿಕೆಯ ರೂಪದಲ್ಲಿ ನೋಡುತ್ತೇವೆ. ಈ ಲಂಡನ್ ದೇವಾಲಯದಲ್ಲಿ ಪರಮಾತ್ಮನನ್ನು ಶಿವಲಿಂಗ, ನಟರಾಜ, ದಕ್ಷಿಣಾಮೂರ್ತಿ ಹಾಗೂ ಭೈರವ – ಹೀಗೆ ಇನ್ನೂ ನಾಲ್ಕು ಬಗೆಯಲ್ಲಿ ರೂಪಿಸಿದ್ದಾರೆ. ಕ್ರೈಸ್ತ ಚರ್ಚುಗಳಲ್ಲಿ ಶಿಲುಬೆಗೇರಿಸಿದ ಕ್ರಿಸ್ತ, ಗೋದಲೆಯಲ್ಲಿನ ಕ್ರಿಸ್ತ, ಹಾಗೂ ಶಿಷ್ಯರೊಡನೆ ಇರುವ ಕ್ರಿಸ್ತನನ್ನು ಪೂಜಿಸುವುದನ್ನು ಇದಕ್ಕೆ ಹೋಲಿಸಿ ನೋಡಬಹುದು. ಯೇಸು ಒಬ್ಬನೇ ಆದರೂ ಅವನನ್ನು ನಾನಾ ರೂಪಗಳಲ್ಲಿ ಹಾಗೂ ಅರ್ಥಗಳಲ್ಲಿ ಪೂಜಿಸಲಾಗುತ್ತದೆ. ಅವನ ವಿವಿಧ ಸ್ವರೂಪಗಳನ್ನು ನೋಡಿ ನಾವು ವಿವಿಧ ಕ್ರೈಸ್ತ ಪ್ರಭುಗಳಿದ್ದಾರೆಂಬ ತೀರ್ಮಾನಕ್ಕೆ ಬರುವುದಿಲ್ಲ.

ಇಬ್ರಾಹಿಂ ಧರ್ಮಗಳಂತೆಯೇ ಹಿಂದೂಧರ್ಮವೂ ಭಗವಂತನು ನಾನಾ ಕಾರ್ಯಗಳನ್ನು ನಿರ್ವಹಿಸಲೆಂದು ಮಹಾನ್ ದೈವಿಕ ಪುರುಷರನ್ನು ಸೃಷ್ಟಿಸಿದ್ದಾನೆಂದು ನಂಬುತ್ತದೆ. ಇಬ್ರಾಹಿಂ ಸಂಪ್ರದಾಯಗಳು ಇವರನ್ನು ದೇವದೂತರೆಂದು ಕರೆಯುತ್ತವೆ. ಹಿಂದೂಧರ್ಮ ಇವರನ್ನು ದೇವ, ದೇವತೆ ಅಥವಾ ಸ್ವಾಮಿ ಎಂದು ಕರೆಯುತ್ತದೆ – ಆದರೆ ಅವರು ಪರಮಾತ್ಮನೆಂದು ತಪ್ಪಾಗಿ ತಿಳಿಯುವುದಿಲ್ಲ! ಹಲವಾರು ಹಿಂದೂ ದೇವಾಲಯಗಳಲ್ಲಿ ಈ ದೇವರುಗಳಿಗೆಂದು ಪ್ರತ್ಯೇಕ ಗುಡಿಗಳಿರುತ್ತವೆ. ಉದಾಹರಣೆಗೆ, ಎನ್ ಫೀಲ್ಡ್ ದೇವಾಲಯದಲ್ಲಿ ಗಣೇಶ, ಸುಬ್ರಹ್ಮಣ್ಯ ಹಾಗೂ ಆಂಜನೇಯರ ಗುಡಿಗಳಿವೆ. ಇಬ್ರಾಹಿಂ ಸಂಪ್ರದಾಯಗಳಲ್ಲಿ ಸಂತ ಮೈಕೆಲ್ ಮತ್ತಿತರ ದೇವದೂತರು ಪರಮ ಪುರುಷನಿಗೆ ಕೆಳಮಟ್ಟದಲ್ಲಿರುವಂತೆಯೇ ಈ ದೇವರುಗಳೂ ಪರಮಾತ್ಮನಿಗಿಂತ ಕೆಳಮಟ್ಟದವರು.

ಲಂಡನ್ ಹಾಗೂ ಅದರ ಹೊರವಲಯಗಳಲ್ಲಿ ಸಂತ ಮೈಕೆಲನ ಹೆಸರಿನಲ್ಲಿ ಐವತ್ತಕ್ಕಿಂತ ಹೆಚ್ಚು ಚರ್ಚುಗಳಿವೆ. ಸಂತ ಮೈಕೆಲ್ ಯಾರು? ಅವನು ವಾಸ್ತವವಾಗಿ ಸಂತನಲ್ಲ, ದೇವತೆಗಳ ನಾಯಕ, ಯೋಧರ, ನಾವಿಕರ ಹಾಗೂ ದೀನ ದುಃಖಿಗಳ ಸಂರಕ್ಷಕ. ರ‍್ಯಾಫೆಲ್, ಗೇಬ್ರಿಯಲ್ ಹಾಗೂ ಯೂರಿಯಲ್ ಎಂಬ ಇತರ ಮೂವರು ದೇವದೂತರನ್ನೂ ಹಲವು ಬಾರಿ ದಿವ್ಯತೆಗೆ ಏರಿಸಲಾಗಿದೆ. ಲಂಡನ್ನಿನಲ್ಲಿ ರ‍್ಯಾಫೆಲ್ ಮತ್ತು ಗೇಬ್ರಿಯಲ್ ಇಬ್ಬರಿಗೂ ಮೀಸಲಾದ ಚರ್ಚುಗಳಿವೆ. ಕೆಲವು ಯೆಹೂದಿ ಸಂಪ್ರದಾಯಗಳು ಹೆಚ್ಚೂ ಕಡಿಮೆ ಹತ್ತು ದೇವದೂತರನ್ನು ಅಂಗೀಕರಿಸುತ್ತವೆ. ಈ ದೇವದೂತರು ಹಿಂದೂ ದೇವರುಗಳಂತೆ ನಿರ್ದಿಷ್ಟವಾದ ಹೊಣೆಗಾರಿಕೆಯನ್ನು ಪೂರೈಸುತ್ತಾ ಭಗವಂತನ ಸಹಾಯಕರಂತೆ ಕಾರ್ಯ ನಿರ್ವಹಿಸುತ್ತಾರೆ. ಒಬ್ಬ ಕ್ರೈಸ್ತ ಅಥವಾ ಯೆಹೂದಿ ಸಂತ ಮೈಕೆಲ್ ಅಥವಾ ಮೇರಿ ಮಾತೆಯನ್ನು ಆರಾಧಿಸುವಾಗ, ಎರಡನೆಯ ಪರಮಾತ್ಮನನ್ನು ಪೂಜಿಸುವುದಿಲ್ಲ, ಭಗವಂತನ ಕೃಪೆಗೆ ಪಾತ್ರರಾದ ಉತ್ತಮ ಪುರುಷನನ್ನು ಪೂಜಿಸುತ್ತಾರೆ. ಅದೇ ರೀತಿ ಹಿಂದೂ ದೇವಾಲಯದಲ್ಲಿ ಇರುವುದು ಒಬ್ಬನೇ ಪರಮಾತ್ಮ, ಜೊತೆಯಲ್ಲಿ ಪರಮಾತ್ಮನಿಗೆ ಸಹಾಯಕರಾಗಿ ಹಲವಾರು ಪೂಜ್ಯ, ಅತಿಮಾನುಷ, ದೇವ ದೇವತೆಯರು ಇರುತ್ತಾರೆ.

ಹಿಂದೂ ದೇವಸ್ಠಾನದಲ್ಲಿ ಪರಮಾತ್ಮ ಹಾಗೂ ದೇವ ದೇವತೆಯರ ಸ್ವಭಾವವನ್ನು ಅರ್ಥಮಾಡಿಕೊಳ್ಳುವಾಗ, ಮೂರನೆಯ ಅಂಶವನ್ನು ನಾವು ಪರಿಗಣಿಸಬೇಕು. ಹಿಂದೂ ಧರ್ಮ ಏಕರೂಪವಾದ, ಅಖಂಡ ಧರ್ಮವಲ್ಲ; ಒಂದೇ ರೀತಿ ತೋರಿದರೂ, ಒಂದಕ್ಕೊಂದು ವ್ಯತಿರಿಕ್ತವಾದ ಸಂಕೀರ್ಣವಾದ ಕುಟುಂಬಕ್ಕೆ ಸೇರಿದ ಧರ್ಮ.

ಮೂರು ಪ್ರಮುಖ ಪಂಥಗಳಿಗೆ ಸೇರಿದವರು ಪರಮಾತ್ಮನನ್ನು ಪ್ರತ್ಯೇಕ ಹೆಸರುಗಳಿಂದ ಆರಾಧಿಸುತ್ತಾರೆ ಎನ್ನುವುದು ನಿಸ್ಸಂಶಯ. ಶೈವರಿಗೆ ಶಿವನೇ ಪರಮಾತ್ಮ, ವೈಷ್ಣವರಿಗೆ ವಿಷ್ಣುವೇ ಪರಮಾತ್ಮ, ಹಾಗೂ ಶಾಕ್ತರು ಶಕ್ತಿ ಮಾತೆಯನ್ನೇ ಭಗವಂತನೆಂದು ಪೂಜಿಸುತ್ತಾರೆ. ಹಲವಾರು ದೇವಾಲಯಗಳಲ್ಲಿ, ವಿಶೇಷವಾಗಿ ಚದರಿ ಹೋಗಿರುವ ಗುಂಪುಗಳಲ್ಲಿ ಈ ಸಂಪ್ರದಾಯಗಳು ಒಂದನ್ನೊಂದು ಅತಿಕ್ರಮಿಸುವುದನ್ನು ಕಾಣುತ್ತೇವೆ. ಶೈವ ಪಂಥದ ಎನ್ ಫೀಲ್ಡ್ ದೇವಸ್ಠಾನದಲ್ಲಿ ವೈಷ್ಣವ ಪಂಥದವರು ಭಗವಂತನೆಂದು ಪೂಜಿಸುವ ಭಗವಾನ್ ವಿಷ್ಣುವಿಗೆ ಪ್ರಮುಖ ಗುಡಿ ಇದೆ. ಹೊರಗಿನವರಿಗೆ ಈ ವಿಶಿಷ್ಟ ದೇವರ ಸನ್ನಿಧಾನ ತೋರಿಕೆಯ ಗೊಂದಲವನ್ನು ಉಂಟುಮಾಡಬಹುದಾದರೂ, ಹಿಂದೂಗಳಿಗೆ ಅದು ಏನನ್ನು ನಿರೂಪಿಸುತ್ತಿದೆ ಎಂಬುದು ತಿಳಿದಿದೆ. ಎಲ್ಲವನ್ನೂ ಒಳಗೊಂಡಿರುವ ಇದರಿಂದ ಅವರು ಕೊಂಚಮಟ್ಟಿಗೆ ಸಂತೋಷವನ್ನೇ ಪಡುತ್ತಾರೆ. ಸ್ಠಿತಿಸ್ಠಾಪಕವಾದ, ಎಲ್ಲವನ್ನೂ ಅಂಗೀಕರಿಸುವ ಈ ಧಾರ್ಮಿಕ ಕುಟುಂಬದಲ್ಲಿ ಕೆಲವು ಮೊನಚಾದ ಶ್ರೇಣಿಗಳೂ ಇವೆ. ಅಂತೆಯೇ ನಿಷ್ಠಾವಂತ ವೈಷ್ಣವ ಪಂಥದವರು ತಮ್ಮ ಆಲಯದಲ್ಲಿ ಶಿವನ ಮೂರ್ತಿಯನ್ನು ಇರಿಸುವುದಿಲ್ಲ ಮತ್ತು ಅತ್ಯಂತ ನಿಷ್ಠಾವಂತ ಶೈವ ಪಂಥದವರು ತಮ್ಮ ಆಲಯದಲ್ಲಿ ವಿಷ್ಣು ಮೂರ್ತಿಯನ್ನು ಎಂದಿಗೂ ಇರಿಸುವುದಿಲ್ಲ.

ಹಿಂದೂ ಧರ್ಮದ ನಾಲ್ಕನೆಯ ಪ್ರಮುಖ ಪಂಥಕ್ಕೆ ಸೇರಿದ ಪ್ರಖ್ಯಾತ ಸ್ಮಾರ್ತ ಸಂಪ್ರದಾಯದವರು ಈ ಸಂಯೋಜನಕ್ಕೆ ಇಂಬುಕೊಟ್ಟಿದ್ದಾರೆ. ಉದಾರ ದೃಷ್ಟಿಯ ಹಿಂದೂ ತತ್ತ್ವಶಾಸ್ತ್ರದ ಪ್ರವಾಹ, ಸಂಸ್ಕೃತಿ ಹಾಗೂ ಸಂಪ್ರದಾಯಗಳು ಸ್ವಂತ ದೇವರಮನೆಗಳಲ್ಲಿ, ಹಾಗೂ ಸಾರ್ವಜನಿಕ ದೇವಾಲಯಗಳಲ್ಲಿ ಭಗವಂತನ ಎಲ್ಲ ಮೂರು ಸ್ವರೂಪಗಳನ್ನು – ವಿಷ್ಣು, ಶಿವ ಹಾಗೂ ಶಕ್ತಿ ಅಲ್ಲದೆ ಕೆಳಮಟ್ಟದ ದೇವರುಗಳನ್ನು ವಿಶೇಷವಾಗಿ ಗಣೇಶ, ಸೂರ್ಯ ಹಾಗೂ ಸುಬ್ರಹ್ಮಣ್ಯರನ್ನು ಒಗ್ಗೂಡಿಸುತ್ತವೆ. ಎಲ್ಲರೂ ಸಗುಣ ಬ್ರಹ್ಮನ ಸಮಾನ ಸ್ವರೂಪವೆಂದೇ ಕಾಣಲಾಗುತ್ತದೆ. ಅವರಲ್ಲಿ ಯಾರನ್ನೇ ಆದರೂ ಪರಮಾತ್ಮನೆಂದು ಪೂಜಿಸಬಹುದಾಗಿದೆ. ಎಲ್ಲರನ್ನೂ ಒಗ್ಗೂಡಿಸುವ ಈ ಆಧುನಿಕ ಮಾದರಿಯನ್ನು ಅನುಸರಿಸುವ ಕೆಲವು ದೇವಸ್ಠಾನಗಳಲ್ಲಿ ಯೇಸು, ಮೇರಿ ಮಾತೆ, ಮೊಹಮ್ಮದ್ ಅಥವಾ ಬುದ್ಢರಿಗೂ ಗುಡಿಗಳು ಇರುವುದನ್ನು ಕಾಣಬಹುದು.

ಹಿಂದೂಗಳು ಪಡೆದಿರುವ, ಹಿಂದೂಗಳಲ್ಲದವರನ್ನು ಕಂಗಾಲು ಮಾಡಬಲ್ಲ ಮತ್ತೊಂದು ಸೂಕ್ಷಾತಿಸೂಕ್ಷ್ಮ ವ್ಯತ್ಯಾಸವೆಂದರೆ ಲಿಂಗ. ತಾತ್ತ್ವಿಕವಾಗಿ ಭಗವಂತ ಯಾವ ಲಿಂಗಕ್ಕೂ ಸೇರಿದವನಲ್ಲವಾದರೂ, ಅವನನ್ನು/ಅವಳನ್ನು ಸಾಮಾನ್ಯವಾಗಿ ಪುರುಷನೆಂದೋ, ಸ್ತ್ರೀಯೆಂದೋ ಅಥವಾ ಇಬ್ಬರ ಸಮ್ಮಿಶ್ರಣವೆಂದೋ ಬಿಂಬಿಸಿರುತ್ತಾರೆ. ಹೀಗಾಗಿ ದೇವಿಯನ್ನು ಶಾಕ್ತರು ಮಾತ್ರವಲ್ಲ, ವೈಷ್ಣವರು, ಶೈವರೆಲ್ಲರೂ ಗೌರವಿಸುತ್ತಾರೆ. ಆದರೆ ಅವಳಿಗೆ ಬೇರೆ ಹೆಸರುಗಳನ್ನು, ಬೇರೆ ವ್ಯಕ್ತಿತ್ವವನ್ನು ನೀಡುತ್ತಾರೆ. ಇದುವೇ ಎನ್ ಫೀಲ್ಡ್ ದೇವಸ್ಥಾನದಲ್ಲಿ ನಟರಾಜ, ಶಿವಲಿಂಗ ಹೀಗೆ ಶಿವನ ನಾನಾ ಸ್ವರೂಪಗಳಿಂದ ಸುತ್ತುವರಿಯಲ್ಪಟ್ಟ ನಾಗಪೂಶನಿ ಅಂಬಿಕೆ (ಶಕ್ತಿ)ಯನ್ನು ಪರಮಾತ್ಮನೆಂದು ಪೂಜಿಸುವುದರ ಹಿಂದೆ ಇರುವ ಸೂಕ್ಷ್ಮ ವಿವರಣೆ. ಪ್ರತ್ಯೇಕ ಗುಡಿಗಳಿದ್ದರೂ ತಾತ್ತ್ವಿಕವಾಗಿ ಶಿವ/ಶಕ್ತಿಯರು ಒಂದೇ, ಅವರನ್ನು ಬೇರ್ಪಡಿಸಲಾಗದು.

ಪವಿತ್ರೀಕರಣಗೊಳಿಸುವ ವಿಧಿಗಳು

ದೇವಸ್ಥಾನಕ್ಕೆ ಚೈತನ್ಯ ಹಾಗೂ ದೈವಿಕ ಶಕ್ತಿಯನ್ನು ನೀಡಲು ನಡೆಸಲಾಗುವ ಧಾರ್ಮಿಕ ಕ್ರಿಯೆ ನಮ್ಮ ಉಪನ್ಯಾಸದ ಎರಡನೆಯ ವಿಷಯ. ಸಂಸ್ಕೃತದಲ್ಲಿ ಅದನ್ನು ಕುಂಭಾಭಿಷೇಕ ಎಂದು ಕರೆಯುತ್ತಾರೆ. ಕೆಲವೊಮ್ಮೆ ಮಹಾ ಎಂದರೆ “ವಿಶೇಷ”ವಾದ ಕುಂಭಾಭಿಷೇಕ ಎಂದು ಕರೆಯಲ್ಪಡುವ ಈ ಪದ ಕುಂಭ – ಒಂದು ಬಿಂದಿಗೆ ಹಾಗೂ ಅಭಿಷೇಕ – ಬಿಂದಿಗೆಗಳಲ್ಲಿ ತುಂಬಿ ಪವಿತ್ರೀಕರಿಸಲ್ಪಟ್ಟ ಜಲವನ್ನು ಮಗುಚಿ ಹಾಕಲಾದ ಬಿಂದಿಗೆಗಳಂತೆ ಕಾಣುವ ತಾಮ್ರದ ಗೋಪುರದ ಶಿಖರಗಳ ಮೇಲೆ ಸುರಿಯುವ ವಿಧಿ ಎಂಬ ಎರಡು ಪದಗಳ ಸಂಯೋಜನದಿಂದ ಉಂಟಾಗಿದೆ. ಕಾಲಕಾಲಕ್ಕೆ, ಸಾಮಾನ್ಯವಾಗಿ ಹನ್ನೆರಡು ವರ್ಷಗಳಿಗೊಮ್ಮೆ ಜೀರ್ಣೋದ್ಧಾರ, ಬೃಹತ್ಪ್ರಮಾಣದ ನಿರ್ಮಲೀಕರಣ, ನವೀಕರಣಗಳನಂತರ ಹೊಸದಾದ ದೇವಾಲಯದ ವಿಧ್ಯುಕ್ತ ಉದ್ಘಾಟನೆ ಮತ್ತು ಅದರ ಪವಿತ್ರೀಕರಣಕ್ಕೆ ಕುಂಭಾಭಿಷೇಕ ಎನ್ನುತ್ತಾರೆ.

ಆಂಗ್ಲದಲ್ಲಿ ಇಂಥ ವಿಧಿಗೆ ‘ಕಾನ್ಸೆಕ್ರೇಶನ್’ ಎನ್ನುತ್ತಾರೆ. ಹಾಗೆಂದರೆ “ಪವಿತ್ರೀಕರಣಗೊಳಿಸು” ಎಂದು ಅರ್ಥ. ಆಲಯ ಪವಿತ್ರೀಕರಣಗೊಳ್ಳಬೇಕಾದರೆ ಭಗವಂತನನ್ನು ಅಲ್ಲಿ ಬಂದು ನೆಲಸುವಂತೆ ಕೋರಿಕೊಂಡು ಪ್ರಾರ್ಥನೆ ಸಲ್ಲಿಸಬೇಕು. ಮಹಾಕುಂಭಾಭಿಷೇಕದ ಸಂದರ್ಭದಲ್ಲಿ ಇದನ್ನು ಪುರೋಹಿತರು ನಿಯಮಾನುಸಾರವಾಗಿ ನಡೆಸುವ ವಿಧಿಗಳು ಹಾಗೂ ಅದಕ್ಕಾಗಿಯೇ ನಿರ್ಮಿಸಲ್ಪಟ್ಟ, ಯಾಗಶಾಲೆ ಎಂದು ಕರೆಯಲಾಗುವ ತಾತ್ಕಾಲಿಕ ಹಂದರದಲ್ಲಿ ನಡೆಸುವ ಹೋಮ ಅಥವಾ ಯಜ್ಞವೆಂದು ಕರೆಯಲಾಗುವ ಪವಿತ್ರಾಗ್ನಿ ಕ್ರಿಯೆಯ ಮೂಲಕ ಮಾಡಲಾಗುತ್ತದೆ. ಹಲವಾರು ಧರ್ಮಗಳಲ್ಲಿ ಅಗ್ನಿಯನ್ನು ಒಂದಲ್ಲ ಒಂದು ರೀತಿಯಲ್ಲಿ ಬಳಸುತ್ತಾರೆ.

ದೇವಲೋಕದ ಅಂತರಿಕ ವಿಶ್ವಗಳಲ್ಲೂ ಅಗ್ನಿಯನ್ನು ಕಾಣಬಹುದೆಂದು ಹಿಂದೂಗಳು ನಂಬುತ್ತಾರೆ. ಅಗ್ನಿಯನ್ನು ಹೊತ್ತಿಸಿ, ಪ್ರಾರ್ಥನಾ ಸ್ತೋತ್ರಗಳನ್ನು ರಾಗವಾಗಿ ಹೇಳುತ್ತಾ ಗಂಟೆಯನ್ನು ಬಾರಿಸಿ ನಾವು ಅಂತರಿಕ ವಿಶ್ವದ ಕರುಣಾಶಾಲಿಗಳನ್ನು ಬಂದು, ನೆರೆದಿರುವ ಎಲ್ಲರನ್ನೂ ಆಶೀರ್ವದಿಸಬೇಕೆಂದು ಆಹ್ವಾನಿಸುತ್ತೇವೆ. ಪ್ರತಿಯೊಂದು ಅಗ್ನಿಕುಂಡದ ಬಳಿಯೂ ತುಂಬಿ ಇರಿಸಲಾದ ನೀರಿನ ಕುಂಭಗಳಲ್ಲಿ ಈ ಪ್ರಾರ್ಥನೆಗಳು ದಿನ ಕಳೆದಂತೆಲ್ಲ ತೀವ್ರಗೊಂಡು ಬೆಳೆಯುತ್ತಾ ಹೋಗುತ್ತವೆ. ಕೊನೆಯ ದಿನ ಈ ಕೊಡಗಳಲ್ಲಿನ ಜಲದಿಂದ ಗೋಪುರದ ಶಿಖರಗಳ ಮೇಲೆ ಹಾಗೂ ಪ್ರತಿಷ್ಠಾಪಿಸಲ್ಪಟ್ಟ ನಾನಾ ದೇವರ ಮೂರ್ತಿಗಳಿಗೆ ಅಭಿಷೇಕ ಮಾಡಲಾಗುತ್ತದೆ. ಈ ಪವಿತ್ರ ಅಭಿಷೇಕ ಧಾರ್ಮಿಕ ಕ್ರಿಯೆಯ ನಿರ್ದಿಷ್ಟ ಮುಹೂರ್ತದಲ್ಲಿ ನೆರವೇರುತ್ತದೆ. ಇದಕ್ಕೆ ಮುಂಚಿತವಾಗಿ ಪ್ರತಿದಿನವೂ ಸಾಂಗವಾದ ವ್ರತಾಚರಣೆಗಳನ್ನು ನಡೆಸಲಾಗುತ್ತದೆ ಮತ್ತು ಅನಂತರದ ಒಂದು ತಿಂಗಳ ಕಾಲ ಪ್ರತಿದಿನವೂ ವಿಶೇಷ ಪೂಜಾ ಕೈಂಕರ್ಯಗಳನ್ನು ಸಲ್ಲಿಸಲಾಗುತ್ತದೆ.

ದೇವರ ಮೂರ್ತಿಗಳ ಮಹತ್ತ್ವ

ಹಿಂದೂಗಳ ಆರಾಧನೆಯಲ್ಲಿ ವಿಗ್ರಹಗಳ ಬಳಕೆ ನಮ್ಮ ಉಪನ್ಯಾಸದ ಮೂರನೆಯ ವಿಷಯ. ಕುಂಭಾಭಿಷೇಕ ಆಚರಣೆಯ ಅಂಗವಾಗಿ ಮಾಡಗಳಲ್ಲಿ ಪ್ರತಿಷ್ಠಾಪಿಸಿರುವ ವಿಗ್ರಹಗಳನ್ನು ಶುದ್ಧಿಗೊಳಿಸಿ, ಅವುಗಳಲ್ಲಿ ದೈವಿಕ ಶಕ್ತಿಯನ್ನು ತುಂಬಲಾಗುತ್ತದೆ. ಅನಂತರ ಆ ವಿಗ್ರಹ ಪೂಜಾರ್ಹವಾದ, ದೇವರೇ ಬಂದು ನೆಲೆಸಿರುವ ಮೂರ್ತಿ ಎನಿಸಿಕೊಳ್ಳುತ್ತದೆ. ಬೇರೆ ಮಾತುಗಳಲ್ಲಿ ಹೇಳಬೇಕಾದರೆ, ಅಂತರಿಕ ವಿಶ್ವದ ಪ್ರಮುಖ ನಿವಾಸಿ ಈ ವಿಗ್ರಹವನ್ನು ತಾತ್ಕಾಲಿಕ ಭೌತ ಶರೀರವನ್ನಾಗಿ ಮಾಡಿಕೊಂಡು, ಆ ಶರೀರದ ಮೂಲಕ ನೆರೆದಿರುವ ಭಕ್ತಜನರನ್ನು ಆಶೀರ್ವದಿಸುತ್ತಾನೆ/ಳೆ. ಹೀಗಾಗಿ ಹಿಂದೂಗಳು ವಿಗ್ರಹವನ್ನೇ ಪೂಜಿಸುತ್ತಿಲ್ಲ ಎಂಬುದನ್ನು ನಾವು ಕಾಣಬಹುದು. ಅವರು ಆ ವಿಗ್ರಹದಲ್ಲಿರುವ ಪವಿತ್ರ ದೇವರನ್ನು ಪೂಜಿಸುತ್ತಾರೆ. ಅನೇಕ ಜನರು ಮೂರ್ತಿಯನ್ನು ಕೇವಲ ದೇವರ ಲಾಂಛನವೆಂದು ಪರಿಗಣಿಸಿದರೆ, ಶ್ರದ್ಧಾವಂತರು ಹಾಗೂ ಅನುಭಾವಿಗಳು ಅದನ್ನೇ ದೇವರು ಅಥವಾ ದೇವತೆ ಎಂದು ಪರಿಗಣಿಸುತ್ತಾರೆ.

ಪುರೋಹಿತರ ಈ ವಿಧಿಗಳು ಪ್ರಜ್ಞಾಪೂರ್ವಕ, ಪ್ರಜ್ಞಾವಂತ, ಕರುಣಾಶಾಲಿಗಳಾದ ಅಂತರಿಕ ಜಗತ್ತಿನ ಉನ್ನತ ಶಕ್ತಿಗಳಿಗೆ ಪ್ರಾರ್ಥನೆಯನ್ನು ಸಲ್ಲಿಸಿ ಅನುಷ್ಠಾನ ಮಾಡಲು ವಿಧಿಸಿರುವ ಮಾರ್ಗದರ್ಶಕ ಸೂತ್ರಗಳನ್ನು ನೇರವಾಗಿ ಅವಲಂಬಿಸಿವೆ. ಹಿಂದೂ ಧರ್ಮ ನಾನಾ ಸ್ತರಗಳಿರುವ ಅಸ್ತಿತ್ವವನ್ನು, ವಿಕಸನದ ಎಲ್ಲ ಹಂತಗಳಲ್ಲಿರುವ ಜೀವಿಗಳಿಂದ ತುಂಬಿರುವ ಕಾಣದ ವಿಶ್ವಗಳನ್ನು ಅಂಗೀಕರಿಸುತ್ತದೆ. ಈ ಸೂಕ್ಷ್ಮವಾದ, ಭೌತವಲ್ಲದ ಆಯಾಮಗಳು ನಮ್ಮ ಚಿಂತನೆಗಳಲ್ಲಿ, ಭಾವಗಳಲ್ಲಿ ಅಸ್ತಿತ್ವದಲ್ಲಿರುವುದನ್ನು ನಾವು ಯಾವಾಗಲೂ ಕಾಣುತ್ತೇವೆ. ನಿದ್ರಿಸುವಾಗ ನಾವು ಭೌತ ಜಗತ್ತನ್ನು ಬಿಟ್ಟು ಕಾಣದ ಜಗತ್ತಿನಲ್ಲಿ ಸಂಪೂರ್ಣವಾಗಿ ಕಾರ್ಯನಿರತರಾಗುತ್ತೇವೆ. ಮರಣದಲ್ಲಿ ನಮ್ಮ ಭೌತ ಶರೀರವನ್ನು ಕಳಚಿ ಹಾಕಿ ಮತ್ತೆ ಭೌತ ಕಾಯವನ್ನು ತಳೆದು ಜನಿಸಿ ಬರುವವರೆಗೆ ಅಂತರಿಕ ಜಗತ್ತಿನಲ್ಲಿ ವಾಸಿಸುತ್ತೇವೆ.