ಸಾಂಕ್ರಾಮಿಕ ರೋಗದ ಕಾರಣದಿಂದ ಉಂಟಾಗಿರುವ ನಿರ್ಬಂಧಗಳು ನಮಗೆ ಮತ್ತು ನಮ್ಮ ಕುಟುಂಬಕ್ಕೆ ನಿರ್ದಿಷ್ಟ ಭವಿಷ್ಯವನ್ನು ಯೋಜಿಸಲು ಮತ್ತು ವ್ಯಕ್ತಪಡಿಸಲು ಸಮಯವನ್ನು ನೀಡಬಹುದು.

ಸದ್ಗುರುಬೋಧಿನಾಥವೇಲನ್ಸ್ವಾಮಿ

ವೈಯಕ್ತಿಕವಾಗಿ ಮತ್ತು ಕೌಟುಂಬಿಕವಾಗಿ ನಾವೆಲ್ಲರೂ ಎದುರಿಸುತ್ತಿರುವ ದೈನಂದಿನ ಕಷ್ಟಕೋಟಲೆಗಳು ಸಾಮಾನ್ಯಕ್ಕಿಂತ ಹೆಚ್ಚಿನದಾಗಿವೆ ಎಂದು ಕೋವಿಡ್ -19 ಸಾಂಕ್ರಾಮಿಕ ಸಾಬೀತುಪಡಿಸುತ್ತಿದೆ. ಲಾಕ್ ಡೌನ್, ಮೊಗಕಾಪುಗಳು ಮತ್ತು ಸಾಮಾಜಿಕವಾಗಿ ದೂರದೂರವೇ ಇರಬೇಕಾದ ಒತ್ತಡಗಳ ನಡುವೆ ಜೀವನದ ಪ್ರಸ್ತುತ ಕ್ಷಣದ ಸವಾಲುಗಳತ್ತ ಹೆಚ್ಚಿನ ಗಮನ ಹರಿಸಬೇಕಾಗಿರುವಾಗ, ನಾವು ನಮ್ಮ ಭವಿಷ್ಯದ ಬಗ್ಗೆ ಸಾಕಷ್ಟು ಆಲೋಚನೆ ನೀಡದಿರುವುದು ಸಹಜ. ಈ ಘಟನೆಗಳನ್ನು ಗಂಭೀರವಾಗಿ ಪರಿಶೀಲಿಸಿದಾಗ, ಸಾಂಕ್ರಾಮಿಕ ರೋಗ ಮುಗಿದ ನಂತರ ನಾವು ಏನು ಮಾಡಬೇಕೆಂಬುದರ ಬಗ್ಗೆ ಒಂದು ಗುರಿ ಇರಿಸಿಕೊಳ್ಳಲು ಸಮಯವನ್ನು ನಿಗದಿಪಡಿಸಬೇಕೆಂದು ಸೂಚಿಸ ಬಯಸುತ್ತೇನೆ. ಹಾಗೆ ಮಾಡಿದಾಗ, ಆ ಗುರಿಯನ್ನು ಸಾಧಿಸಲು ಏನು ಮಾಡಬೇಕೆಂಬ ಯೋಜನೆಗಳನ್ನು ಕಾರ್ಯಗತ ಗೊಳಿಸಬಹುದು.  ವೈಯಕ್ತಿಕವಾಗಿ ನಿಮಗೆ, ನಿಮ್ಮ ಕುಟುಂಬದ ಎಲ್ಲ ಸದಸ್ಯರಿಗೆ, ನಿಮ್ಮ ಉದ್ಯೋಗದ ಸ್ಥಳ ಮತ್ತು ನೀವು ತೊಡಗಿಕೊಂಡಿರುವ ಲಾಭಪಡೆಯುವ ಉದ್ದೇಶವಿಲ್ಲದೆ ಜನಕಲ್ಯಾಣ ಮಾಡುವ ಯಾವುದೇ ಸಂಸ್ಥೆಗೂ  ಗುರಿ ಮತ್ತು ಯೋಜನೆಗಳನ್ನು ಹೊಂದುವುದು ಅಗತ್ಯವಾಗುತ್ತದೆ. ಸಾಂಕ್ರಾಮಿಕ ಮುಗಿದನಂತರದ ಜೀವನ ಸಾಂಕ್ರಾಮಿಕ ಪೂರ್ವದ ಜೀವನವನ್ನು ಹೋಲುವುದಿಲ್ಲ ಎನ್ನುವುದೇ ಇದಕ್ಕೆ ಪ್ರಮುಖ ಕಾರಣ. ಪ್ರಮುಖ ಬದಲಾವಣೆಗಳು ಉಂಟಾಗಿವೆ ಎನ್ನುವುದನ್ನು ನಮ್ಮ ಗುರಿ ಮತ್ತು ಯೋಜನೆಗಳು ಗಣನೆಗೆ ತೆಗೆದುಕೊಳ್ಳಬೇಕು. ಯಾವ ಬಗೆಯ ಬದಲಾವಣೆಗಳು?  ಕಛೇರಿಗೆ ಹೋಗದೆ ಮನೆಯಿಂದಲೇ ಕೆಲಸ ಮಾಡುವುದು ಹೆಚ್ಚು ಸಾಮಾನ್ಯವಾಗುತ್ತದೆ ಮತ್ತು ಇಂಟರ್ ನೆಟ್ ಮೂಲಕ ಹಲವಾರು ತಿಂಗಳುಗಳ ಕಾಲ ನಡೆಸಲಾದ ಅಧ್ಯಯನದ ಮಿತಿಯನ್ನು ಸರಿದೂಗಿಸಲು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಗಮನ ನೀಡಬೇಕಾಗಬಹುದು. ಇನ್ನೂ ಕೆಲವು ಕಾಲದವರೆಗೆ ಜನರು ಹೆಚ್ಚು ಗುಂಪು ಸೇರಬಾರದೆಂದು ದೇವಾಲಯಗಳನ್ನು ನಿರ್ಬಂಧಿಸಬಹುದು. ಹೀಗಾಗಿ ಪರ್ಯಾಯ ಆಧ್ಯಾತ್ಮಿಕ ಚಟುವಟಿಕೆಗಳನ್ನು ಅಭಿವೃದ್ಧಿಗೊಳಿಸುವ ಅಗತ್ಯ ಉಂಟಾಗಬಹುದು.   

ನನ್ನ ಗುರುಗಳು ಯೋಜನೆಯ ಪ್ರಕ್ರಿಯೆಯನ್ನು ನಾಲ್ಕು ಹಂತಗಳಲ್ಲಿ ವಿಭಜಿಸಿದ್ದಾರೆ.  ಒಂದು ಸೂತ್ರದಲ್ಲಿ, “ಶಿವನ ಭಕ್ತರು ಪ್ರತಿ ಯೋಜನೆಯನ್ನೂ ಉದ್ದೇಶಪೂರ್ವಕವಾಗಿ ಚಿಂತಿಸಿ,  ಎಚ್ಚರಿಕೆಯಿಂದ ಪರಿಗಣಿಸಿದನಂತರವೇ ಕಾರ್ಯದಲ್ಲಿ ತೊಡಗುತ್ತಾರೆ. ಸ್ಪಷ್ಟ ಉದ್ದೇಶ, ಪೂರ್ವಸಿದ್ಧತೆ, ಪಟ್ಟುಹಿಡಿದು ಕೆಲಸ ಮಾಡುವುದು ಮತ್ತು ನಿರಂತರ ಸಾಧನೆಯ ಮೂಲಕ ಅವರು ಪ್ರತಿಯೊಂದು ಕಾರ್ಯದಲ್ಲೂ ಯಶಸ್ವಿಯಾಗುತ್ತಾರೆ ” ಎಂದು ಅವರು ಬರೆದಿದ್ದಾರೆ.   

ಸ್ಪಷ್ಟಉದ್ದೇಶ 

“ಸ್ಪಷ್ಟ ಉದ್ದೇಶ” ವನ್ನು ಮೊದಲು ನೋಡೋಣ. ಗುರಿ ಎನ್ನುವುದು ಉದ್ದೇಶದ ಮತ್ತೊಂದು ಪದ. ಪ್ರತಿಯೊಬ್ಬರ ಮನಸ್ಸಿನ ಮುಂಚೂಣಿಯಲ್ಲಿ ಸಾಮಾನ್ಯವಾಗಿ ಮಾಸಿಕ ಅಗತ್ಯಗಳನ್ನು ಪೂರೈಸುವುದು, ನಿವೃತ್ತಿಗಾಗಿ ಮತ್ತು ಮಕ್ಕಳ ಶಿಕ್ಷಣಕ್ಕಾಗಿ ಹಣ ಉಳಿಸುವುದು – ಈ ಆರ್ಥಿಕ ಗುರಿಗಳು ಇರುತ್ತವೆ. ಶೈಕ್ಷಣಿಕ ಗುರಿಗಳು ಸಾಮಾನ್ಯವಾಗಿ ದ್ವಿತೀಯ ಆದ್ಯತೆಯನ್ನು ಪಡೆಯುತ್ತವೆ –   ಮಕ್ಕಳ ಪ್ರಾಪಂಚಿಕ ಮತ್ತು ಧಾರ್ಮಿಕ ಶಿಕ್ಷಣಕ್ಕೆ ಅನ್ವಯವಾಗುವಂತೆ ಇದು ವಯಸ್ಕರು ಹೊಸ ಕೌಶಲ್ಯಗಳನ್ನು ಪಡೆಯುವುದಕ್ಕೂ ಅನ್ವಯಿಸುತ್ತದೆ. ಸೈದ್ಧಾಂತಿಕವಾಗಿ ಗುರಿಗಳು ಜೀವನದ ಆಧ್ಯಾತ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ದೈಹಿಕ ಅಂಶಗಳನ್ನು ಒಳಗೊಂಡಿರುತ್ತವೆ. ಪ್ರತಿಯೊಂದರ ಉದಾಹರಣೆ ಹೀಗಿರಬಹುದು:

ಆಧ್ಯಾತ್ಮಿಕ ಗುರಿ: ದೂರದಲ್ಲಿರುವ ದೇವಾಲಯಗಳಿಗೆ ಪ್ರತಿ ವರ್ಷ ತೀರ್ಥಯಾತ್ರೆ ಹೋಗುವುದು,  ಹಠ ಯೋಗದಲ್ಲಿ ಹೆಚ್ಚಿನ ಸಾಧನೆ ಮಾಡುವುದು

ಸಾಮಾಜಿಕ ಗುರಿ: ಕುಟುಂಬದೊಡನೆ ಮಾಡುವ ವಿಶೇಷ ಪ್ರವಾಸಗಳು, ಸಾರ್ವಜನಿಕ ಸೇವೆ ಅಥವಾ ಶಿಕ್ಷಣ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು 

ಸಾಂಸ್ಕೃತಿಕ ಗುರಿ: ಸಂಗೀತ, ಕಲೆ, ನಾಟಕ ಮತ್ತು ನೃತ್ಯದ ಪ್ರದರ್ಶನಗಳಿಗೆ ಹೋಗುವುದು; ಕರಕುಶಲ ಕಲೆ, ವಾದ್ಯ ಸಂಗೀತ ಅಥವಾ ಹೊಸ ಹಾಡುಗಳನ್ನು ಕಲಿಯುವುದು

ಶಾರೀರಿಕ ಗುರಿ: ನಿಯಮಿತ ವ್ಯಾಯಾಮ, ಆಹಾರ, ಮನೆ, ಅಭ್ಯಾಸ ಮತ್ತು ಉಡುಪಿನಲ್ಲಿ ಸುಧಾರಣೆ; ಪರಿಸರ ಸಂರಕ್ಷಣೆ

ಪೂರ್ವಸಿದ್ಧತೆ

ಸ್ಪಷ್ಟ ಉದ್ದೇಶದಿಂದ “ಪೂರ್ವಸಿದ್ಧತೆ” ಗೆ ಹೋಗೋಣ. ಹಲವಾರು ವರ್ಷಗಳಿಂದ ಗುರಿಯನ್ನು ಸಾಧಿಸುವ ಬಗ್ಗೆ ಅನೇಕ ಜನರೊಂದಿಗೆ ಮಾತನಾಡಲು,  ಅನಂತರ ಅವರು ಯಶಸ್ವಿಯಾಗಿದ್ದಾರೆಯೇ ಎಂದು ಕೇಳಲು ನನಗೆ ಅವಕಾಶಗಳು ದೊರೆತಿವೆ. ಯಶಸ್ಸು ಲಭಿಸದಿರಲು ಹಲವು ಕಾರಣಗಳಿವೆ. ಆದರೆ, ಸಾಮಾನ್ಯವಾಗಿ ಪೂರ್ವಸಿದ್ಧತೆ ಇಲ್ಲದಿರುವುದೇ ಸಂಕೀರ್ಣವಾದ ಗುರಿ ಯಶಸ್ವಿಯಾಗದಿರಲು ಕಾರಣ ಎನ್ನಬಹುದು. ಪೂರ್ವಸಿದ್ಧತೆಯನ್ನು ಎಚ್ಚರಿಕೆಯಿಂದ ನಡೆಸಿಲ್ಲ. ಅದು ಸಾಕಷ್ಟು ವಿವರವಾಗಿ ಇಲ್ಲ. ಪ್ರಾಯೋಗಿಕ ಯೋಜನೆಗಿಂತ ಹೆಚ್ಚಾಗಿ ಅದನ್ನು ಆಂತರಿಕ ಆವೇಗದಲ್ಲಿ ತಯಾರಿಸಲಾಗಿದೆ. ಯಾವುದೇ ಸಂಕೀರ್ಣ ಕಾರ್ಯವನ್ನು ಯೋಜಿಸುವಾಗ, ಇತರರೊಡನೆ ಸಮಾಲೋಚನೆ ನಡೆಸುವುದು ಒಳ್ಳೆಯದು. ಎಲ್ಲವನ್ನೂ ನೀವೇ ಲೆಕ್ಕ ಹಾಕಲು ಸಾಧ್ಯವಾಗುವುದಿಲ್ಲ. ಆ ಕ್ಷೇತ್ರದಲ್ಲಿ  ಯಾರಾದರೂ ಅನುಭವಿಗಳೊಡನೆ ಪರ್ಯಾಲೋಚಿಸಬೇಕು. ಉದಾಹರಣೆಗೆ, ಹವಾಯಿ ರಿಯಲ್ ಎಸ್ಟೇಟ್ ತನ್ನದೇ ಆದ ವಿಶಿಷ್ಟ ಏರಿಳಿತಗಳನ್ನು ಹೊಂದಿದೆ.  ಹವಾಯಿಯಲ್ಲಿ ಮನೆ ಖರೀದಿಸುವ ಬಗ್ಗೆ ನೀವು ಯೋಚಿಸುತ್ತಿದ್ದರೆ, ಹವಾಯಿ ರಿಯಲ್ ಎಸ್ಟೇಟ್ ಬಗ್ಗೆ ತಿಳಿದಿರುವ ಜನರೊಡನೆ ನೀವು ಮಾತನಾಡಬೇಕು. ಇಲ್ಲದಿದ್ದರೆ, ನೀವು ಕೇವಲ ತಪ್ಪಾದ ಸಮಯದಲ್ಲಿ ಮನೆ ಖರೀದಿಸಬಹುದು ಮತ್ತು ಅದರ ಪರಿಣಾಮಗಳನ್ನು ಅನುಭವಿಸಬೇಕಾಗಬಹುದು. ನಿಮ್ಮ ಜೀವನದ ಉಳಿತಾಯವನ್ನು ನೀವು ಯಾವುದೇ ಪ್ರಮುಖ ಉದ್ಯಮದಲ್ಲಿ ತೊಡಗಿಸುವ ಮುನ್ನ, ಲಭ್ಯವಿರುವ ಉತ್ತಮ ಸಲಹೆಯನ್ನು ಪಡೆಯಲು ಸಲಹೆಗಾರರನ್ನು ನೇಮಿಸಿಕೊಳ್ಳುವುದೇ ಬುದ್ಧಿವಂತಿಕೆ.   

ಪಟ್ಟುಹಿಡಿದುಕೆಲಸಮಾಡುವುದು 

ಸೂತ್ರದ ಮೂರನೇ ಭಾಗ – “ಪಟ್ಟುಹಿಡಿದು ಕೆಲಸ ಮಾಡುವುದು.”  ಪಟ್ಟುಹಿಡಿದು ಕೆಲಸ ಮಾಡದಿರುವ ಉದಾಹರಣೆಯನ್ನು ನೋಡೋಣ. ದೀರ್ಘಕಾಲದ ಬೆನ್ನು ನೋವು ಇರುವ ಯಾರಾದರೂ ನಿಮಗೆ ಗೊತ್ತಿದೆ. ಅವರಿಗೆ ಒಂದು ಸ್ಪಷ್ಟ ಉದ್ದೇಶವಿದೆ: ಅವರು ನೋವನ್ನು ನಿವಾರಿಸಲು, ಅಥವಾ ಕನಿಷ್ಠ ಪಕ್ಷ ಗಮನಾರ್ಹವಾಗಿ ಕಡಿಮೆ ಮಾಡಲು ಏನನ್ನಾದರೂ ಮಾಡಲು ಸಿದ್ಧರಾಗಿದ್ದಾರೆ. ಅವರ ಯೋಜನೆಯಲ್ಲಿ ವ್ಯಾಯಾಮ ಮಾಡಲು ಸೂಚಿಸುವ ಶಾರೀರಕ  ಚಿಕಿತ್ಸಕ (ಫಿಸಿಕಲ್ ಥೆರಪಿಸ್ಟ್)ನ ಬಳಿ ಚಿಕಿತ್ಸೆ ಪಡೆಯುವುದು ಸೇರಿರುತ್ತದೆ. ಅವರು ಒಂದು ತಿಂಗಳು ವ್ಯಾಯಾಮ ಮಾಡಿ ನಿಲ್ಲಿಸಿಬಿಡುತ್ತಾರೆ. ಅನಂತರ ಆಯುರ್ವೇದದ ವೈದ್ಯರ ಬಳಿಗೆ ಹೋಗುತ್ತಾರೆ. ವೈದ್ಯರು ಗಿಡಮೂಲಿಕೆಗಳ ಪಥ್ಯವನ್ನು ಅನುಸರಿಸುವಂತೆ ಸೂಚಿಸುತ್ತಾರೆ. ವ್ಯಾಯಾಮ ಮಾಡುವುದಕ್ಕಿಂತ ಅದು ಸುಲಭ. ಅವರು ಎರಡು ತಿಂಗಳು ಪಥ್ಯವನ್ನು ನಡೆಸುತ್ತಾರೆ. ಅನಂತರ ನಿಧಾನವಾಗಿ ಅದನ್ನು ತ್ಯಜಿಸುತ್ತಾರೆ. ಆರು ತಿಂಗಳ ನಂತರ, ನೋವು ಕಾಡಿದಾಗ, ಮತ್ತೆ ಅದರ ಪರಿಹಾರಕ್ಕಾಗಿ ಮತ್ತೊಬ್ಬ ವೈದ್ಯರ ಬಳಿಗೆ ಹೋಗುತ್ತಾರೆ. ಅದು ಮಾನವ ಸ್ವಭಾವ. ಪರಿಹಾರ ನಮ್ಮ ಮುಂದೆಯೇ ಇದ್ದರೂ, ನಾವು ಅದನ್ನು ಪೂರ್ಣವಾಗಿ ಪರಿಪಾಲಿಸುವುದಿಲ್ಲ. ನಡುವೆಯೇ ತಾಳ್ಮೆ ಕಳೆದುಕೊಂಡು ಬೇರೊಂದು ವಿಧಾನವನ್ನು ಅನುಸರಿಸುತ್ತೇವೆ.  ಒಂದು ಪರಿಹಾರದಿಂದ ಇನ್ನೊಂದಕ್ಕೆ ಹಾರಿದರೆ ಬೆನ್ನು ನೋವು ಪರಿಹಾರವಾಗುವುದಿಲ್ಲ. ನಮ್ಮ ಸ್ಪಷ್ಟ ಉದ್ದೇಶ ಸಿದ್ಧಿಯಾಗುವುದಿಲ್ಲ ಎಂದರೆ ಆಶ್ಚರ್ಯ ಪಡುವುದೇಕೆ? 

ನಮ್ಮ ಯೋಜನೆ ವಿಫಲವಾಗುತ್ತಿರುವುದು ಸ್ಪಷ್ಟವಾಗಿ ಕಂಡುಬಂದಾಗ, ಅದನ್ನು ಬದಲಾಯಿಸುವುದು ಕೆಲವೊಮ್ಮೆ ಅಗತ್ಯವಾಗಿರುತ್ತದೆ. ಗುರುದೇವರು ಈ ಕುರಿತು ಹೀಗೆ ಬರೆದಿದ್ದಾರೆ: “ಬದಲಾಯಿಸುತ್ತ ಇರುವುದು ಎಂದರೆ ಸಂದಿಗ್ದತೆ, ದೃಢ ಮನಸ್ಸು ಇಲ್ಲದಿರುವುದು. ದೃಢ ಮನಸ್ಸು ಇಲ್ಲದಿರುವ ವ್ಯಕ್ತಿಯ ಮತ್ತು ಸಂದರ್ಭದ ಬದಲಾವಣೆಯಿಂದಾಗಿ ಬುದ್ಧಿವಂತಿಕೆಯಿಂದ ಮನಸ್ಸನ್ನು ಬದಲಾಯಿಸುವ ವ್ಯಕ್ತಿಯ ಸಾಮರ್ಥ್ಯವನ್ನು ನಾವು ವಿವೇಚಿಸಿ ನೋಡುವುದು ಹೇಗೆ? ದೃಢ ಮನಸ್ಸು ಇಲ್ಲದಿರುವ ವ್ಯಕ್ತಿ ಚಂಚಲ ಸ್ವಭಾವದವನು. ಅವನಿಗೆ ತನ್ನಲ್ಲಿಯೇ ನಂಬಿಕೆ ಇಲ್ಲ, ಉದ್ದೇಶವಿಲ್ಲದೆ ಅಥವಾ ಕಾರಣವಿಲ್ಲದೆ ಅವನು ಮನಸ್ಸು ಬದಲಾಯಿಸುತ್ತಾನೆ. ಪಟ್ಟುಹಿಡಿದು ಕೆಲಸ ಮಾಡುವ ವ್ಯಕ್ತಿ ಹೊಸ ಮಾಹಿತಿಯ ಆಧಾರವನ್ನು ಅನುಸರಿಸಿ, ಪ್ರಬುದ್ಧ ಕಾರಣಗಳಿಗಾಗಿ ಮನಸ್ಸನ್ನು ಬದಲಾಯಿಸಲು ತಯಾರಾಗಿರುತ್ತಾನೆ. ಆದರೆ ಅಂಥ ಕಾರಣಗಳು ಇಲ್ಲದಿರುವಾಗ ಎಂಥ ಪರಿಸ್ಥಿತಿಯಲ್ಲೂ ತನ್ನ ನಿರ್ಣಯಗಳಿಗೆ ದೃಢವಾಗಿ ಅಂಟಿಕೊಳ್ಳುತ್ತಾನೆ. ಅವನ ನಿರ್ಧಾರ ವಿವೇಚನೆಯನ್ನು ಆಧರಿಸಿದೆ. ಮೊದಲಿಗೆ ದೃಢ ನಿರ್ಧಾರವನ್ನು ಕೈಗೊಂಡ ನಂತರ, ಹೊಸ ಮಾಹಿತಿಯ ಬೆಳಕಿನಲ್ಲಿ ಮಾತ್ರ ಅದನ್ನು ಪುನರ್ ಪರಿಶೀಲಿಸಿ.”  

ಅಡೆತಡೆಗಳನ್ನು ನಿವಾರಿಸಬೇಕಾದರೆ  ಪಟ್ಟುಹಿಡಿದು ಕೆಲಸ ಮಾಡುವುದು ಅಥವಾ ಸತತ ಪ್ರಯತ್ನ ಮುಖ್ಯ. ನಮ್ಮ ಬಳಿ ಉತ್ತಮ ಯೋಜನೆ ಇದೆ, ಸ್ಪಷ್ಟ ಉದ್ದೇಶವಿದೆ, ನಾವು ಮುಂದೆ ಸಾಗುತ್ತಿದ್ದೇವೆ ಮತ್ತು ಮಾರ್ಗದಲ್ಲಿ ಕೆಲವು ಪ್ರಮುಖ ಅಡೆತಡೆಗಳನ್ನು ಎದುರಿಸುತ್ತೇವೆ ಎಂದು ಭಾವಿಸೋಣ. ಹಿಂದೂಗಳು ಇದನ್ನು ಕೆಲವೊಮ್ಮೆ, “ಓ, ನಾನು ಇದನ್ನು ಮಾಡಬಾರದೆಂದು ವಿಘ್ನನಾಶಕ ಗಣೇಶ ನಮ್ಮ ಯೋಜನೆಗೆ ಅಡ್ಡಿ ಉಂಟುಮಾಡುತ್ತಿದ್ದಾನೆ” ಎಂದು ಭಾವಿಸಿ,  ಯೋಜನೆಯನ್ನು ನಿಲ್ಲಿಸುತ್ತಾರೆ.  ಅಡಚಣೆ ಎದುರಾದರೆ ಯೋಜನೆಯನ್ನು ತ್ಯಜಿಸಬೇಕು ಎಂದು ಅರ್ಥವಲ್ಲ. ಕೆಲವು ಅಡೆತಡೆಗಳನ್ನು ನಿವಾರಿಸಿಕೊಂಡು ಹೋಗುವುದು ಒಳ್ಳೆಯದು. ಇನ್ನೂ ಕೆಲವು ಅಡೆತಡೆಗಳನ್ನು ಗಣೇಶನ ಮಾರ್ಗದರ್ಶನದಲ್ಲಿ ಎಚ್ಚರಿಕೆಯಿಂದ ವಿಶ್ಲೇಷಿಸಬೇಕಾಗುತ್ತದೆ. ಅಂತಃಪ್ರಜ್ಞೆಯು ಯಾವುದು ಸರಿಯಾದ ಮಾರ್ಗವೆಂದು ಮಾರ್ಗದರ್ಶನ ನೀಡುತ್ತದೆ. ಕೆಲವೊಮ್ಮೆ ಅವ್ಯಾವಹಾರಿಕರಾಗಿರುವುದೇ ನಮ್ಮ ಸಮಸ್ಯೆಯಾಗಿರುತ್ತದೆ. ಒಂದು ದೊಡ್ಡ ಯೋಜನೆಯನ್ನು ಕೈಗೆತ್ತಿಕೊಂಡಾಗ,  ಹೆಚ್ಚು ಅಡೆತಡೆಗಳನ್ನು ನಿರೀಕ್ಷಿಸಬೇಕಾಗುವುದೆಂದು ನಾನು ಆಗಾಗ ಹೇಳುತ್ತಿರುತ್ತೇನೆ. ಹವಾಯಿಯಲ್ಲಿ ಕೈಯಿಂದ ಕೆತ್ತಲಾದ ಕಗ್ಗಲ್ಲಿನ ದೇವಾಲಯ ನಿರ್ಮಾಣದ ಯೋಜನೆಯಲ್ಲಿ ನಮ್ಮ ಮಠ ಎಷ್ಟು ಅಡೆತಡೆಗಳನ್ನು ಎದುರಿಸಿದೆ? ಬಹಳಷ್ಟು! ಸತತ ಪ್ರಯತ್ನದಿಂದ ಪ್ರತಿ ಅಡೆತಡೆಯನ್ನೂ ನಿವಾರಿಸಲಾಯಿತು. ಆದ್ದರಿಂದ, ಒಮ್ಮೆ ನೀವು ಸ್ಪಷ್ಟ ಉದ್ದೇಶವನ್ನು ಪಡೆದು, ಬುದ್ಧಿವಂತ ಯೋಜನೆಯನ್ನು ರಚಿಸಿದರೆ, ನಿಮ್ಮ ಯೋಜನೆಯನ್ನು ಪ್ರಾರಂಭಿಸುವ ಮೊದಲು ನೀವು ನಿರೀಕ್ಷಿಸುವ ಅಡೆತಡೆಗಳ ಸಂಖ್ಯೆಗಳ ಬಗ್ಗೆ ವಸ್ತುಸ್ಥಿತಿಯ ಅರಿವು ಪಡೆದಿರಬೇಕು. ಆಗ, ಅಡೆತಡೆಗಳು ಬಂದಾಗ, ನೀವು ನಿರುತ್ಸಾಹಗೊಳ್ಳುವ ಬದಲು ಕಿರುನಗೆ ಬೀರಿ, “ಓ! ಅಡಚಣೆ ನಂಬರ್ ಒಂದು, ನಿನಗೆ ಸ್ವಾಗತ. ನಾವು ಕೆಲಸ ಪ್ರಾರಂಭಿಸಿ ಸುಮಾರು ಮೂರು ಅಥವಾ ನಾಲ್ಕು ತಿಂಗಳುಗಳು ಕಳೆದಿವೆ; ನಿನ್ನ ಆಗಮನದ ನಿರೀಕ್ಷೆಯಲ್ಲಿಯೇ ಇದ್ದೆ!”  ಎನ್ನುತ್ತೀರಿ. ನಿಮಗೆ ಆಶ್ಚರ್ಯ ಅಥವಾ ನಿರಾಶೆ ಉಂಟಾಗುವುದಿಲ್ಲ.   

ಪುಶ್ 

ಗುರುದೇವರ ಸೂತ್ರದ ಕೊನೆಯ ಕಲ್ಪನೆ “ಪುಶ್”. ಈ ಸನ್ನಿವೇಶದಲ್ಲಿ, ಪುಶ್ ಎಂದರೆ ಇಚ್ಛಾಶಕ್ತಿ-ಏನನ್ನಾದರೂ ಸಾಧಿಸುವ ಸಾಮರ್ಥ್ಯ, ಅದನ್ನು ಪೂರೈಸುವ ಶಕ್ತಿ. ಪುಶ್ ಕೊರತೆಯ ಉದಾಹರಣೆಯೆಂದರೆ ಶಾಲೆಯಲ್ಲಿ ಉತ್ತಮ ಪರಿಣಾಮ ಹೊಂದಬಯಸುವ ವಿದ್ಯಾರ್ಥಿ, ಬೆಳಿಗ್ಗೆ ಬೇಗನೆ ಎದ್ದು ಕಷ್ಟಪಟ್ಟು ಅಧ್ಯಯನ ಮಾಡುವ ಯೋಜನೆ ಹಾಕುತ್ತಾನೆ, ಆದರೆ ಬೆಳಿಗ್ಗೆ ಬೇಗನೆ ಎದ್ದೇಳುವುದೇ ಇಲ್ಲ. ಫಲಿತಾಂಶ ಏನು? ಅವನು ಉತ್ತಮ ಪರಿಣಾಮ ಹೊಂದುವುದಿಲ್ಲ. ಯೋಜನೆ  ಇದೆ, ಆದರೆ ಅದನ್ನು ಪೂರೈಸುವ ಇಚ್ಛಾಶಕ್ತಿ ಇಲ್ಲ. ಇಚ್ಛಾಶಕ್ತಿಯನ್ನು ಸ್ನಾಯುಗಳಿಗೆ ಹೋಲಿಸಬಹುದು. ಸ್ನಾಯುಗಳು ಬಹಳ ಕುತೂಹಲವನ್ನು ಉಂಟುಮಾಡುತ್ತವೆ. ನೀವು ಸ್ನಾಯುವನ್ನು ಹೆಚ್ಚು ಬಳಸಿದರೆ, ಅದು ಬಲಗೊಳ್ಳುತ್ತದೆ. ನೀವು ಅದನ್ನು ಬಳಸಿದಾಗ ಹೆಚ್ಚಿನ ವಿಷಯಗಳು ದೂರವಾಗುತ್ತವೆ. ಒಂದು ಜಾಡಿ ಅಕ್ಕಿ ತೆಗೆದುಕೊಳ್ಳಿ. ಅಕ್ಕಿಯನ್ನು ಬಳಸಿ;  ಖಾಲಿ ಜಾಡಿ ಉಳಿಯುತ್ತದೆ. ಹಣ: ನಿಮ್ಮ ಬ್ಯಾಂಕ್ ಖಾತೆಯಲ್ಲಿ ಹಣವಿದೆ, ನೀವು ಅದನ್ನು ಬಳಸುತ್ತೀರಿ, ಬ್ಯಾಂಕ್ ಖಾತೆ ಖಾಲಿಯಾಗುತ್ತದೆ. ಆದರೆ ಇಚ್ಛಾಶಕ್ತಿ ಇದಕ್ಕೆ ತದ್ವಿರುದ್ಧವಾಗಿದೆ. ನೀವು ಅದನ್ನು ಹೆಚ್ಚು ಹೆಚ್ಚು ಬಳಸಿದರೆ, ಹೆಚ್ಚು ಹೆಚ್ಚು ಇಚ್ಛಾಶಕ್ತಿ ನಿಮ್ಮ ಬಳಿಯೇ ಉಳಿಯುತ್ತದೆ. ಅಂತೆಯೇ, ನೀವು ಸ್ನಾಯುವಿಗೆ ಹೆಚ್ಚು ಕೆಲಸ ಕೊಟ್ಟಷ್ಟೂ, ಅದು ಬಲಗೊಳ್ಳುತ್ತದೆ,  ಹೆಚ್ಚು ಕೆಲಸ ಮಾಡಲು ಅದಕ್ಕೆ ಸಾಧ್ಯವಾಗುತ್ತದೆ.  ಆದ್ದರಿಂದ, ನಿಮ್ಮ ಇಚ್ಛಾಶಕ್ತಿಯನ್ನು ನೀವು ಸಾಕಷ್ಟು ಬಳಸುತ್ತಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ. ಅದೃಷ್ಟವಶಾತ್, ನಿಮ್ಮ ಇಚ್ಛಾಶಕ್ತಿಯನ್ನು ಬಳಸಲು ದಿನವಿಡೀ ಅನೇಕ ಅವಕಾಶಗಳಿವೆ. ಗುರುದೇವರು ಸ್ಪಷ್ಟ ಮಾರ್ಗದರ್ಶನ ಸೂತ್ರವೊಂದನ್ನು ನೀಡಿದ್ದಾರೆ. ಇಚ್ಛಾಶಕ್ತಿಯನ್ನು ಬಲಪಡಿಸಲು ನೀವು ಎರಡು ಕೆಲಸಗಳನ್ನು ಮಾಡಬೇಕಾಗಿದೆ: ನೀವು ಪ್ರಾರಂಭಿಸುವ ಪ್ರತಿಯೊಂದು ಕೆಲಸವನ್ನು ಪೂರೈಸಿ ಮತ್ತು ಅದನ್ನು ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಚೆನ್ನಾಗಿ ಮಾಡಿ. ಇನ್ನಷ್ಟು ಚೆನ್ನಾಗಿ ಮಾಡಿ. ಅದು ನಿಮ್ಮ ಇಚ್ಛಾಶಕ್ತಿಯನ್ನು ಬಲಪಡಿಸುತ್ತದೆ. 

ಪ್ರಾರ್ಥನೆ 

ಗುರುದೇವರು ತಮ್ಮ ಕೆಲವು ಬರಹಗಳಲ್ಲಿ ಸೇರಿಸಿದ  “ಪ” ಅಕ್ಷರದಿಂದ ಆರಂಭವಾಗುವ ಮತ್ತೊಂದು ಪದ ಇದೆ, ಅದು ’ಪ್ರಾರ್ಥನೆ.’ “ನಿಮ್ಮ ಬುದ್ಧಿವಂತ ಯೋಜನೆಯನ್ನು ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲು ಮರೆಯದಿರಿ” ಎಂದು ಅವರು ಬರೆದಿದ್ದಾರೆ, ಬೇರೆ ರೀತಿಯಲ್ಲಿ ಹೇಳುವುದಾದರೆ, ದೇವಾಲಯಕ್ಕೆ ಹೋಗಿ ಗಣೇಶನಿಗೆ ಒಂದು ಅರ್ಚನೆಯನ್ನು ಮಾಡಿ, ಧಾರ್ಮಿಕ ಆಶೀರ್ವಾದದೊಂದಿಗೆ ಯೋಜನೆಯನ್ನು ಆರಂಭಿಸಿ. ಪ್ರಮುಖ ಚಟುವಟಿಕೆಗಳನ್ನು ಶುಭ ದಿನದಂದು ಪ್ರಾರಂಭಿಸುವುದು ಒಳ್ಳೆಯದು. ಹೊಸ ಯೋಜನೆಗಳನ್ನು ಪ್ರಾರಂಭಿಸಲು ಯಾವ ದಿನಗಳು ಶುಭ ಮತ್ತು ಯಾವ ದಿನಗಳು ಶುಭವಲ್ಲ  ಎಂಬ ಮಾಹಿತಿಯನ್ನು ಹಿಂದೂ ಜ್ಯೋತಿಶ್ಶಾಸ್ತ್ರ ಒದಗಿಸುತ್ತದೆ.  

ಸ್ಪಷ್ಟ ಉದ್ದೇಶ, ಚೆನ್ನಾಗಿ ಆಲೋಚಿಸಿ ಮಾಡಲಾದ ಯೋಜನೆ, ಪಟ್ಟುಹಿಡಿದು ಕೆಲಸ ಮಾಡುವುದು ಮತ್ತು ಇಚ್ಛಾಶಕ್ತಿ ಎಲ್ಲವೂ ಮೇಳೈಸಿದರೆ,  ಭಗವಂತನ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾದ ನಿಮ್ಮ ಯೋಜನೆ ಖಂಡಿತ ಯಶಸ್ವಿಯಾಗುತ್ತದೆ. ಪ್ರಸ್ತುತ ಸಾಂಕ್ರಾಮಿಕ ಭವಿಷ್ಯದ ಬಗ್ಗೆ ವ್ಯಾವಹಾರಿಕವಾಗಿ ಚಿಂತಿಸಲು ಸಾಕಷ್ಟು ಸಮಯವನ್ನು ಒದಗಿಸಿದೆ.