ಹಿಂದೂ ಧರ್ಮದ ಪ್ರಮುಖ ಸ್ವರೂಪವಾದ ಆಲಯ ಆರಾಧನೆ ಮತ್ತು ಅತೀಂದ್ರಿಯ ಅಂಶಗಳ ಪರಿಶೀಲನೆ

ಸದ್ಗುರು ಬೋಧಿನಾಥ ವೇಲನ್‍ಸ್ವಾಮಿ

English |
Tamil |
Kannada |
Hindi |
Portuguese |
Marathi |
Spanish |

ದೇವಾಲಯದ ಮೂರ್ತಿ ಪೂಜೆಯನ್ನು ತರಕಾರಿ ಪಲ್ಯವನ್ನು ತಯಾರಿಸುವುಕ್ಕೆ ಹೋಲಿಸೋಣ. ಪಲ್ಯ ಮಾಡಲು ತರಕಾರಿಗಳನ್ನು ಸ್ವಚ್ಛಗೊಳಿಸಿ, ಅವುಗಳ ಸಿಪ್ಪೆ ಅಥವಾ ತಿನ್ನಲಾಗದ ಭಾಗಗಳನ್ನು ಕತ್ತರಿಸಿ ಹಾಕಿ, ಒಂದೇ ಸಮನಾಗಿ ಕತ್ತರಿಸಬೇಕು. ಬಾಣಲಿಯಲ್ಲಿ, ಕೊಂಚ ಎಣ್ಣೆಯನ್ನು ಬಿಸಿ ಮಾಡಿ, ಮಸಾಲೆ, ಒಣ ಮೆಣಸಿನಕಾಯಿ, ಸಾಸುವೆ ಮತ್ತು ಕೊಂಚ ಉದ್ದಿನಬೇಳೆಯನ್ನು ಸೇರಿಸಬೇಕು. ಸಾಸುವೆ ಸಿಡಿದು ಪರಿಮಳ ಬೀರಿದನಂತರ ಕರಿಬೇವು ಮತ್ತು ಈರುಳ್ಳಿ ಸೇರಿಸಬೇಕು. ಸ್ವಲ್ಪ ಹೊತ್ತಿನನಂತರ ಟೊಮೇಟೊ ಸೇರಿಸಿ ಸ್ವಲ್ಪ ಸಮಯದವರೆಗೆ ಕೈಯ್ಯಾಡಿಸಬೇಕು. ಅನಂತರ ಉಪ್ಪು, ಅರಿಶಿನ ಮತ್ತು ಮೆಣಸಿನಪುಡಿಯನ್ನು ಸೇರಿಸಿ ಮತ್ತೆ ಸ್ವಲ್ಪ ಹೆಚ್ಚು ಕೈಯ್ಯಾಡಿಸಬೇಕು. ಕೊನೆಗೆ ಹಸಿಯಾದ, ಆವಿಯಲ್ಲಿ ಬೇಯಿಸಿದ, ನೀರಿನಲ್ಲಿ ಬೇಯಿಸಿದ, ಸುಟ್ಟ ಅಥವಾ ಕರಿದ ತರಕಾರಿಗಳನ್ನು ಸೇರಿಸಿ ಬೇಯಿಸಬೇಕು. ಯಾವುದೇ ಉತ್ತಮ ಬಾಣಸಿಗನೂ ಹೇಳುವಂತೆ, ಸಪ್ಪೆ ತರಕಾರಿಯನ್ನು ರುಚಿಕರವಾದ ಪಲ್ಯವನ್ನಾಗಿ ಮಾಡಲು ಬಹಳ ಸಾಮಗ್ರಿಗಳು ಬೇಕಾಗುತ್ತವೆ. ಅಂತಹ ಪಲ್ಯ ನಮ್ಮ ಶರೀರವನ್ನು ಪೋಷಿಸುತ್ತದೆ, ದೇವಾಲಯದ ಪೂಜೆ ನಮ್ಮ ಆತ್ಮವನ್ನು ಪೋಷಿಸುತ್ತದೆ.

ಆರಾಧನೆ ಪರಿಣಾಮಕಾರಿ ಆಗಬೇಕಾದರೆ, ನಿರ್ದಿಷ್ಟ ಪ್ರಕ್ರಿಯೆಯೊಂದನ್ನು ಅನುಸರಿಸಬೇಕು. ಅದಕ್ಕೆ ಹಲವಾರು ಪ್ರಮುಖ ಅಂಶಗಳು ಅತ್ಯಗತ್ಯ.

1. ಮೊದಲನೆಯದಾಗಿ ಆಂತರಿಕ ಜಗತ್ತಿನೊಡನೆ ದೇವಾಲಯದ ಸಂಬಂಧದ ಸ್ವರೂಪ ಏನೆಂದು ತಿಳಿಯಬೇಕು. ಇದು ಒಂದು ದೇವಾಲಯದಿಂದ ಬೇರೊಂದಕ್ಕೆ ಗಣನೀಯವಾಗಿ ಬದಲಾಗುತ್ತದೆ. ಇದು ಶಕ್ತಿಶಾಲಿಯಾಗಿರಬೇಕು. ಇದನ್ನು ನಾವು ಕಂಪ್ಯೂಟರ್ ಜಾಲವನ್ನು ಅಂತರ್ಜಾಲಕ್ಕೆ ಜೋಡಿಸುವುದಕ್ಕೆ ಹೋಲಿಸಬಹುದು. ಉದಾಹರಣೆಗೆ, ಅತ್ಯಂತ ವೇಗವಾದ ಬೆಳಕಿನ ಸಂಪರ್ಕಕ್ಕೆ ಹೋಲಿಸಿದರೆ T1 ಸಂಪರ್ಕ ಅಲ್ಪ ಪ್ರಮಾಣದ ಅಂಕಿಸಂಖ್ಯೆಗಳ ಮಾಹಿತಿಯನ್ನು ಮಾತ್ರ ವರ್ಗಾಯಿಸುತ್ತದೆ. ಆಂತರಿಕ ಜಗತ್ತಿನೊಡನೆ ದೇವಾಲಯ ಪಡೆದಿರುವ ಸಂಪರ್ಕದ ಬಲ – ಆಲಯವನ್ನು ಅಲ್ಲಿ ಆರಾಧಿಸಲ್ಪಡುವ ಭಗವಂತನ ಅಂತರ್ದೃಷ್ಟಿಗೆ ಅನುರೂಪವಾಗಿ ನಿರ್ಮಿಸಲಾಗಿದೆಯೇ; ಅಲ್ಲಿ ಎಷ್ಟು ವರ್ಷಗಳಿಂದ ಸತತವಾಗಿ ಶ್ರದ್ಧೆಯಿಂದ ಆರಾಧನೆಯನ್ನು ನಡೆಸಲಾಗುತ್ತಿದೆ, ಪ್ರತಿ ವರ್ಷ ಎಷ್ಟು ಬಗೆಯ ಪೂಜೆಗಳನ್ನು ಶಾಸ್ತ್ರೋಕ್ತವಾಗಿ ನಡೆಸಿಕೊಂಡು ಬರಲಾಗುತ್ತಿದೆ – ಈ ಮೂರು ಅಂಶಗಳನ್ನು ಅವಲಂಬಿಸಿದೆ.

2. ದೇವರನ್ನು ಆರಾಧಿಸಲು ಆಯ್ಕೆ ಮಾಡಲಾದ ದಿನ ಆಲಯದ ದೇವರ ಪಾಲಿಗೆ ಮಂಗಳಕರವಾಗಿರಬೇಕು – ಇದು ಆರಾಧನೆ ಪರಿಣಾಮಕಾರಿ ಆಗಬೇಕಾದರೆ ಬೇಕಾದ ಎರಡನೆಯ ಅಂಶ. ಗಣೇಶ ಚತುರ್ಥಿಯಂತಹ ವಾರ್ಷಿಕ ಹಬ್ಬವು ಗಣೇಶನನ್ನು ಪೂಜಿಸಲು ಅತ್ಯಂತ ಶುಭಕರವಾದುದು. ಗಣೇಶನ ಪೂಜೆಗೆ ಪ್ರತಿ ತಿಂಗಳೂ ಇತರ ದಿನಗಳಿಗಿಂತ ಚತುರ್ಥಿ ತಿಥಿ, ಹೆಚ್ಚು ಶುಭಕರವಾಗಿದೆ. ಎರಡೂ ಸಂದರ್ಭಗಳಲ್ಲಿ, ಶುಭ ತಿಥಿ ಅಥವಾ ನಕ್ಷತ್ರ ಎಷ್ಟು ಹೊತ್ತಿಗೆ ಬರುವುದೋ ಅದೇ ದೇವತಾರಾಧನೆಗೆ ಶುಭ ಮುಹೂರ್ತ ಎಂದು ಪರಿಗಣಿತವಾಗಿದೆ. ಉದಾಹರಣೆಗೆ, ಹವಾಯಿಯಲ್ಲಿ, 2020 ರ ಗಣೇಶ ಚತುರ್ಥಿ ಸೆಪ್ಟೆಂಬರ್ 21 ರಂದು ಬೆಳಿಗ್ಗೆ 7 ರಿಂದ ಸೆಪ್ಟೆಂಬರ್ 22 ರ ಬೆಳಿಗ್ಗೆ 5 ಗಂಟೆಯವರೆಗೆ ಇತ್ತು. ದೇವತಾರಾಧನೆಗೆ ಸೂಕ್ತವೆಂದು ನಿಗದಿಯಾದ ಶುಭ ಮುಹೂರ್ತ ಕೆಲವು ದಿನಗಳ ಹಿಂದೆಯೇ ಬಂದಿದ್ದರೂ, ಕೆಲವು ದೇವಾಲಯಗಳು ಭಕ್ತರ ಅನುಕೂಲಕ್ಕಾಗಿ ವಾರಾಂತ್ಯದಲ್ಲಿ ವಾರ್ಷಿಕ ಆರಾಧನೆಯನ್ನು ನಡೆಸುತ್ತವೆ. ಇದು ಸರಿಯಲ್ಲ.

3. ಪೂಜೆಯನ್ನು ನಡೆಸುತ್ತಿರುವ ಪೂಜಾರಿ ಅಥವಾ ಪುರೋಹಿತರು ಕೌಶಲ್ಯ, ಜ್ಞಾನ, ಪರಿಶುದ್ಧತೆ, ಆಧ್ಯಾತ್ಮಿಕ ತಿಳುವಳಿಕೆ ಹಾಗೂ ಗಾಢವಾದ ಭಕ್ತಿ ಹೊಂದಿದ್ದಾರೆಯೇ ಎನ್ನುವುದೇ ಆರಾಧನೆ ಪರಿಣಾಮಕಾರಿ ಆಗಬೇಕಾದರೆ ಬೇಕಾದ ಮೂರನೆಯ ಅಂಶ. ಪುರೋಹಿತರು ಪೂಜೆಯ ಸಮಯದಲ್ಲಿ ಮಂತ್ರಗಳು, ಮುದ್ರೆಗಳು ಮತ್ತು ವಿಧ್ಯುಕ್ತ ಆಚರಣೆಗಳಿಂದ ದೇವತೆಯನ್ನು ಆಹ್ವಾನಿಸುತ್ತಾರೆ. ಅವರು ದೇವರನ್ನು ಆ ಮೂರ್ತಿಯಲ್ಲಿ ಬಂದು ನೆಲಸಿ, ಭಕ್ತರ ಪ್ರಾರ್ಥನೆಯನ್ನು ಸ್ವೀಕರಿಸಲು ಮತ್ತು ಎಲ್ಲರ ಮೇಲೆ ಆಶೀರ್ವಾದ ಮತ್ತು ಪ್ರೀತಿಯ ಮಳೆ ಸುರಿಸಬೇಕೆಂದು ಬೇಡಿಕೊಳ್ಳುತ್ತಾರೆ. ನನ್ನ ಗುರು, ಶಿವಾಯ ಸುಬ್ರಮುನಿಯಸ್ವಾಮಿ ಈ ಪ್ರಕ್ರಿಯೆಯ ಬಗೆಗೆ ಹೆಚ್ಚಿನ ಒಳನೋಟಗಳನ್ನು ನೀಡುತ್ತಾರೆ: “ನೀವು ದೇವಾಲಯದಲ್ಲಿ ದೇವರನ್ನು ಪೂಜಿಸುವಾಗ, ಪೂಜೆ ಮತ್ತು ಆಚರಣೆಗಳ ಮೂಲಕ, ಆ ದೇವರನ್ನು ಸೂಕ್ಷ್ಮ ರೂಪದಿಂದ ಈ ಸ್ಥೂಲರೂಪಕ್ಕೆ ತರುತ್ತೀರಿ. ನಿಮ್ಮ ಆರಾಧನೆ ಮತ್ತು ಭಕ್ತಿಯ ಮೂಲಕ, ನಿಮ್ಮ ಆಲೋಚನೆಗಳ ರೂಪದಲ್ಲಿ ಮತ್ತು ದೈಹಿಕ ಪ್ರಭಾಮಂಡಲದ ಮೂಲಕವೂ ಶಕ್ತಿಯನ್ನು ಪೂರೈಸುತ್ತೀರಿ. ಇದನ್ನು ನಡೆಸಲು ಪುರೋಹಿತರು ಕಲ್ಲಿನ ಮೂರ್ತಿಯನ್ನು ಶುದ್ಧೀಕರಿಸಿ, ಅದರಲ್ಲಿ ಕಾಂತಶಕ್ತಿ ಮೂಡುವಂತೆ ಮಾಡುತ್ತಾರೆ. ದೇವ ದೇವತೆಯರೂ ಶಿಲಾಮೂರ್ತಿಗೆ ಕಾಂತಶಕ್ತಿಯಿಂದ ತಮ್ಮ ಶಕ್ತಿಯನ್ನು ತುಂಬುತ್ತಾರೆ. ಅಂತಿಮವಾಗಿ ಅದಕ್ಕೆ ಮುಹೂರ್ತ ಒದಗಿ, ದೇವ ದೇವತೆಯರು ಸೂಕ್ಷ್ಮರೂಪದಿಂದ ಸ್ಥೂಲರೂಪದಲ್ಲಿ ಹೊರಬಂದು ಜನರನ್ನು ಆಶೀರ್ವದಿಸಬಹುದು. ಅವರು ಒಂದು ಕ್ಷಣ ಮಾತ್ರ ಅಲ್ಲಿದ್ದುದನ್ನು ನೀವು ಗಮನಿಸುತ್ತೀರಿ, ಆದರೆ ಅವರ ಪಾಲಿಗೆ ಅದು ಹೆಚ್ಚಿನ ಸಮಯವಾಗಿರುತ್ತದೆ. ಆಂತರಿಕ ಜಗತ್ತಿನಲ್ಲಿ ಸಮಯದ ಅರ್ಥ ವಿಭಿನ್ನವಾಗಿರುತ್ತದೆ.”

ಸಂಸ್ಕೃತವನ್ನು ಬಿಟ್ಟು ಬೇರೆ ಭಾಷೆಗಳಲ್ಲಿ ಪೂಜೆಗಳನ್ನು ನಡೆಸುವ ಪ್ರವೃತ್ತಿ ಆಧುನಿಕ ಹಿಂದೂ ಧರ್ಮದಲ್ಲಿ ಕಂಡುಬರುತ್ತಿದೆ. ಸ್ತೋತ್ರ ಪಠಣವನ್ನು ಅರ್ಥಮಾಡಿಕೊಳ್ಳಲು ಭಕ್ತರಿಗೆ ಸಾಧ್ಯವಾಗುತ್ತದೆ ಎನ್ನುವುದು ಇದಕ್ಕೆ ಸಮರ್ಥನೆಯಾಗಿದೆ. ಇದನ್ನು ಮಂತ್ರಗಳ ಮೂಲವಾದ ವೇದಗಳು ಮತ್ತು ಅಗಮಗಳು ಬೆಂಬಲಿಸುವುದಿಲ್ಲ. ಸಾಂಪ್ರದಾಯಿಕವಾಗಿ ಎಲ್ಲ ಮಂತ್ರಗಳನ್ನೂ ಸಂಸ್ಕೃತದಲ್ಲಿ ಮಾತ್ರ ಪಠಿಸಲಾಗುತ್ತದೆ. ಪ್ರಾದೇಶಿಕ ಭಾಷೆಯಲ್ಲಿ ಪಠಿಸಲಾದ ಮಂತ್ರಗಳು, ಸಂಸ್ಕೃತದಲ್ಲಿ ಪಠಿಸಿದಾಗ ಉಂಟುಮಾಡುವಷ್ಟು ಪ್ರಭಾವಶಾಲಿಯಾಗಿರುವುದಿಲ್ಲ ಎನ್ನುವುದು ನನ್ನ ಅನುಭವ. ಪೂಜಾ ಪಠಣಗಳು ಸಂಸ್ಕೃತದಲ್ಲಿ ಪ್ರಭಾವಶಾಲಿಯಾಗಿರುತ್ತವೆ ಎಂದು ಗುರುದೇವರು ದೃಢ ಪಡಿಸಿದ್ದಾರೆ. ಸಂಸ್ಕೃತ ದೇವರನ್ನು ಸನ್ನಿಧಿಗೆ ಬರುವಂತೆ ಹೆಚ್ಚು ಪರಿಣಾಮಕಾರಿಯಾಗಿ ಆಮಂತ್ರಿಸುತ್ತದೆ. ಪ್ರಾದೇಶಿಕ ಭಾಷೆಗಳಲ್ಲಿ ಭಕ್ತಿ ಸಂಗೀತ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ದೇವರ ಬಗ್ಗೆ ಪ್ರೀತಿಯಿಂದ ಹಾಡಿದಾಗ, ಹೃದಯವನ್ನು ಕರಗಿಸುವ ಸಾಮರ್ಥ್ಯವನ್ನು ಹೊಂದಿರುವ ಅಸಂಖ್ಯಾತ ಸ್ತೋತ್ರಗಳು ಪ್ರಾದೇಶಿಕ ಭಾಷೆಗಳಲ್ಲಿವೆ. ನಿಖರವಾದ ವಿವರಣೆಗಳು ಮತ್ತು ವ್ಯಾಖ್ಯಾನಗಳನ್ನು ನೀಡುವುದರಲ್ಲಿ ಪ್ರಾದೇಶಿಕ ಭಾಷೆಗಳು ಹೆಚ್ಚು ಸಾಮರ್ಥ್ಯ ಪಡೆದಿವೆ ಎಂದು ಅವರು ತಿಳಿಸಿದ್ದಾರೆ.

4. ಆರಾಧನೆ ಪರಿಣಾಮಕಾರಿ ಆಗಬೇಕಾದರೆ ಬೇಕಾದ ನಾಲ್ಕನೆಯ ಅಂಶ ನಮ್ಮ ಕೆಲವು ಓದುಗರನ್ನು ಆಶ್ಚರ್ಯಗೊಳಿಸಬಹುದು. ಆಲಯಕ್ಕೆ ಬರುವ ಭಕ್ತರ ಕೈಂಕರ್ಯ ಆರಾಧನೆಯ ಪ್ರಭಾವದಲ್ಲಿ ಗಮನಾರ್ಹ ವ್ಯತ್ಯಾಸವನ್ನುಂಟುಮಾಡುತ್ತದೆ. ಹಲವು ವರ್ಷಗಳ ಹಿಂದೆ ಕವಾಯಿ ಆಧೀನಂನಲ್ಲಿ ಸನ್ಯಾಸಿಗಳು ನಡೆಸಿದ ಪೂಜೆಗಳಿಂದ ಇದು ನನ್ನ ಗಮನಕ್ಕೆ ಬಂದಿತು. ಸನ್ಯಾಸಿಗಳು ರಾತ್ರಿ ತಡವಾಗಿ ಅಥವಾ ಮುಂಜಾನೆ ಭಕ್ತರು ಇಲ್ಲದಿದ್ದಾಗ ಹಲವಾರು ಪೂಜೆಗಳನ್ನು ಮಾಡುತ್ತಾರೆ. ಆರಾಧನೆ ಪ್ರಭಾವಶಾಲಿಯಾಗಿರಲು ಭಕ್ತಿ ಭಾವವನ್ನು ಹೊಂದಿರುವ ಭಕ್ತರ ಉಪಸ್ಥಿತಿ ಪ್ರಮುಖ ಅಂಶವಾಗಿದೆ ಎಂಬುದು ಸ್ಪಷ್ಟವಾಯಿತು. ಏಕೆ? ಏಕೆಂದರೆ ಭಕ್ತರು ತಮ್ಮ ಆರಾಧನೆ, ಭಗವಂತನ ಕೃಪೆ ಹೊಂದಲು ತಮ್ಮ ಉತ್ಕಟವಾದ ಹಂಬಲ, ತಮ್ಮ ಆಲೋಚನಾ ಸರಣಿ ಮತ್ತು ದೈಹಿಕ ಪ್ರಭಾಮಂಡಲದ ಮೂಲಕ ಶಕ್ತಿಯನ್ನು ಪೂರೈಸುತ್ತಾರೆ.

5. ಹೆಚ್ಚಿಟ್ಟ ಹಣ್ಣು, ಬೇಯಿಸಿದ ಆಹಾರ, ನೀರು, ಪರಿಮಳಯುಕ್ತ ಪುಷ್ಪಗಳು ಮತ್ತು ಹಾಲನ್ನು ನೈವೇದ್ಯವಾಗಿ ಅರ್ಪಿಸುವುದು ಆರಾಧನೆ ಪ್ರಭಾವಶಾಲಿಯಾಗಿರಲು ಬೇಕಾದ ಐದನೇ ಅಂಶವಾಗಿದೆ. ಭಗವಂತನ ಆರಾಧನೆಯ ಆಂತರಿಕ ಕಾರ್ಯಕ್ರಮದಲ್ಲಿ ಇವು ಪ್ರಮುಖ ಪಾತ್ರ ವಹಿಸುತ್ತವೆ. ದೇವರು ನಿವೇದನೆ ಮಾಡಲಾದ ಆಹಾರದ ಮೂಲ ಸ್ವರೂಪವನ್ನು ಸ್ವೀಕರಿಸುವುದಿಲ್ಲ, ಪುರೋಹಿತರು ನೈವೇದ್ಯವನ್ನು ನಿವೇದಿಸುವಾಗ, ಅದರೊಳಗಿನ ಜೀವ ಶಕ್ತಿ ಅಥವಾ ಪ್ರಾಣವನ್ನು ಸ್ವೀಕರಿಸುತ್ತಾನೆ.

ಈ ತತ್ವಗಳು ಯಜ್ಞ ಅಥವಾ ಹೋಮ ಎಂದು ಕರೆಯಲ್ಪಡುವ ಅಗ್ನಿಯ ವಿಧಿಗೂ ಅನ್ವಯವಾಗುತ್ತವೆ. ಬೆಂಗಳೂರಿನ ಕೈಲಾಸ್ ಆಶ್ರಮದ ಮುಖ್ಯಸ್ಥರಾದ ಜಯೇಂದ್ರಪುರಿ ಮಹಾಸ್ವಾಮೀಜಿ ಕೆಲವು ವರ್ಷಗಳ ಹಿಂದೆ ಹವಾಯಿಯ ನಮ್ಮ ಮಠಕ್ಕೆ ಭೇಟಿ ನೀಡಿದ್ದರು. ಅವರ ಮೂವರು ಪುರೋಹಿತರು ನಮ್ಮ ಕಡವುಳ್ ದೇವಸ್ಥಾನದಲ್ಲಿ ತಾವು ಭಾರತದಿಂದ ತಂದಿದ್ದ ಧಾನ್ಯ ಮತ್ತು ಸಮಿತ್ತುಗಳನ್ನು ಅಗ್ನಿಗೆ ಸಮರ್ಪಿಸಿ ಮಹಾಯಜ್ಞವನ್ನು ನಡೆಸಿದರು. ಅರ್ಪಿಸಲಾದ ನೈವೇದ್ಯವನ್ನು ಸ್ವೀಕರಿಸಿದ ಅಗ್ನಿ, ಅದನ್ನು ಪರಿಶುದ್ಧ ಸ್ವರೂಪದಲ್ಲಿ ದೇವರಿಗೆ ತಲುಪಿಸುತ್ತಾನೆ. ಆಲಯಕ್ಕೆ ಆಗಮಿಸಿದವರನ್ನು ಆಶೀರ್ವದಿಸಲು ಅದನ್ನು ಬಳಸಲಾಗುತ್ತದೆ ಎಂದು ಸ್ವಾಮೀಜಿ ಅನಂತರ ವಿವರಿಸಿದರು.

ಮೇಲೆ ವಿವರಿಸಲಾದ ಐದು ಅಂಶಗಳೂ ಇರುವಾಗ, ಆ ದೇವತಾರಾಧನೆ ಖಂಡಿತವಾಗಿ ಪರಿಣಾಮಕಾರಿ ಆಗಿರುತ್ತದೆ ಮತ್ತು ಇದಕ್ಕೆ ಆಂತರಿಕ ಜಗತ್ತಿನ ಕೃಪಾಶೀರ್ವಾದವೂ ದೊರೆಯುತ್ತದೆ. ಮಧ್ಯಮ ಕಾಲಾವಧಿಯ ಆರಾಧನೆಯಲ್ಲಿ, ದೇವರ ಆಶೀರ್ವಾದ ಅಂತಿಮ ಆರತಿಯ ಸಮಯದಲ್ಲಿ ದೊರೆಯುತ್ತದೆ. ದೀರ್ಘ ಕಾಲಾವಧಿಯ ಪೂಜೆಯಲ್ಲಿ, ದೇವರಿಗೆ ಅಲಂಕಾರ ಮುಗಿದನಂತರ ಪರದೆ ತೆರೆದಾಗಲೂ ಭಗವಂತನ ಆಶೀರ್ವಾದ ದೊರೆಯುತ್ತದೆ. ಭಗವಂತ ಮತ್ತು ಅವನ ಸಹಾಯಕರು ಅಥವಾ ದೇವತೆಗಳು ಈ ಎರಡು ಕ್ಷಣಗಳಲ್ಲಿಯೇ ತಾವು ಪಡೆದ ಪ್ರಾಣವನ್ನು ನಿಬಿಡವಾದ ಆಂತರಿಕ ಪ್ರಜ್ಞೆಯಿಂದ ಮುಕ್ತಗೊಳಿಸಿ, ಪ್ರತಿ ಭಕ್ತನ ಪ್ರಭಾಮಂಡಲಕ್ಕೆ ಅಭಿವ್ಯಕ್ತಿಸುತ್ತಾರ. ಈ ರೀತಿ ಆಶೀರ್ವಾದ ಪಡೆದ ಭಕ್ತರು ಆಧ್ಯಾತ್ಮಕವಾಗಿ ಉದ್ಧಾರಗೊಂಡ ಭಾವನೆಯಿಂದ, ಭಾರವಾದ ಮಾನಸಿಕ ತಳಮಳಗಳಿಂದ ಮುಕ್ತರಾಗಿ, ದೇವಾಲಯದಿಂದ ಹಿಂದಿರುಗುತ್ತಾರೆ. ಕೆಲವರು ಹೆಚ್ಚು ಶಾಂತಿಯುತ ಜೀವನವನ್ನು ನಡೆಸುವ ಪ್ರೇರಣೆ ಪಡೆಯುತ್ತಾರೆ, ಕುಟುಂಬದಲ್ಲಿ ಹೆಚ್ಚಿನ ಸಾಮರಸ್ಯದಿಂದ ಬಾಳುತ್ತಾರೆ ಮತ್ತು ಸಮುದಾಯದಲ್ಲಿ ಹೆಚ್ಚು ಸಹಿಷ್ಣುತೆಯನ್ನು ತೋರುತ್ತಾರೆ. ಕೆಲವರು ಭಕ್ತಿ ಸಂಗೀತ, ಕಲೆ ಮತ್ತು ನೃತ್ಯದ ರೂಪದಲ್ಲಿ ಸಾಂಪ್ರದಾಯಿಕ ಹಿಂದೂ ಸಂಸ್ಕೃತಿಯನ್ನು ಚಿರಂತನವಾಗಿ ರಕ್ಷಿಸುವ ಸ್ಫೂರ್ತಿ ಪಡೆಯುತ್ತಾರೆ.

ಮತ್ತೆ ಕೆಲವರು ದೇವರಿಂದ ಜೀವನ ಗತಿಯನ್ನೇ ಬದಲಾಯಿಸುವ ಸಂದೇಶವನ್ನು ಪಡೆಯಬಹುದು. ನನ್ನ ಗುರುದೇವರು ಈ ಅತೀಂದ್ರಿಯ ಪ್ರಕ್ರಿಯೆಯನ್ನು ಹೀಗೆ ವಿವರಿಸಿದ್ದಾರೆ: “ದರ್ಶನವನ್ನು ಅರ್ಥಮಾಡಿಕೊಳ್ಳಲು, ಭಾಷೆಯ ದೈನಂದಿನ, ಆದರೆ ಸೂಕ್ಷ್ಮವಾದ ಸಂವಹನವನ್ನು ಪರಿಗಣಿಸಿ. ನಿಮ್ಮ ಕಿವಿ ಒಂದು ಸೂಕ್ಷ್ಮ ಅಂಗ. ಅದರ ಮೂಲಕ ನೀವು ನನ್ನ ಧ್ವನಿಯನ್ನು ಕೇಳುತ್ತಿದ್ದೀರಿ. ನನ್ನ ಮಾತಿನ ಅರ್ಥ ನಿಮ್ಮ ಮನಸ್ಸಿಗೆ ತಿಳಿಯುತ್ತದೆ, ಏಕೆಂದರೆ ಈ ಕಂಪನಗಳನ್ನು ಭಾಷಾಂತರಿಸಿ, ನಾನು ಮಾತನಾಡುವ ಭಾಷೆಯನ್ನು ತಿಳಿದುಕೊಳ್ಳಲು ನಿಮಗೆ ತರಬೇತಿ ನೀಡಲಾಗಿದೆ. ದರ್ಶನವೂ ಒಂದು ಬಗೆಯ ಕಂಪನ. ಗರ್ಭಗೃಹದ ದೇವತೆಯ ಸರಳ ಭೌತಿಕ ಸ್ವರೂಪವನ್ನು ವೀಕ್ಷಿಸಿದೊಡನೆ ಅದರ ಮೊದಲ ಅನುಭವ ಉಂಟಾಗುತ್ತದೆ. ಅನಂತರ, ಆ ಭೌತಿಕ ನೋಟ ಒಂದು ಅತೀಂದ್ರಿಯ ದೃಷ್ಟಿಗೆ ಅಥವಾ ನಿಮ್ಮ ನರಮಂಡಲದ ಸೂಕ್ಷ್ಮ ಶಕ್ತಿ ಕೇಂದ್ರಗಳ- ಚಕ್ರಗಳ ಮೂಲಕ ಪಡೆದ ಪರಿಷ್ಕೃತ ಅರಿವಿಗೆ ದಾರಿ ಮಾಡಿಕೊಡುತ್ತದೆ. ಪ್ರಜ್ಞಾಪೂರ್ವಕವಾಗಿ ಅಲ್ಲದಿದ್ದರೂ, ಈ ಗ್ರಾಹಕಗಳು ಸೂಕ್ಷ್ಮ ಸಂದೇಶವನ್ನು ಕಳುಹಿಸುತ್ತವೆ. ತಕ್ಷಣವೇ ಅಲ್ಲವಾದರೂ, ದರ್ಶನದ ಮೂಲಕ ಮಹಾದೇವನಿಂದ, ಗಣೇಶನಿಂದ, ಸುಬ್ರಹ್ಮಣ್ಯನಿಂದ, ಭಗವಾನ್ ಶಂಕರನಿಂದ ನೇರವಾಗಿ ಬರುವ ಸಂದೇಶ ನಿಮ್ಮ ಜೀವನದಲ್ಲಿ ವಿಶದವಾಗುತ್ತದೆ.

“ಇದು ದೇವರು ನಡೆಸುವ ಸಂಭಾಷಣೆಯ ವಿಧಾನ. ಈ ಸಂಭಾಷಣೆ ಪ್ರತಿದಿನ ನಿಮ್ಮ ಅನುಭವಕ್ಕೆ ಬರುವ ಭಾಷೆಯ ಸಂವಹನಕ್ಕಿಂತ ಹೆಚ್ಚು ವಾಸ್ತವಿಕವಾದ ಸಂವಹನವಾಗಿದೆ. ಸಂವಹನವನ್ನು ತಕ್ಷಣ ಅರ್ಥಮಾಡಿಕೊಳ್ಳುವ ಅಗತ್ಯವಿಲ್ಲ. ಭಕ್ತನು ಯಾವುದೇ ನಿರ್ದಿಷ್ಟ ಸಂದೇಶ ದೊರೆಯಲಿಲ್ಲ ಎಂದು ಭಾವಿಸಿ ದೇವಾಲಯದಿಂದ ಹೋಗಬಹುದು, ಅಥವಾ ದರ್ಶನದ ಅರ್ಥವೇನೆಂದು ಅವನ ಬೌದ್ಧಿಕ ಮನಸ್ಸಿಗೆ ಗೋಚರವಾಗದೆ ಇರಬಹುದು. ನೀವು ಈಗ ಓದುತ್ತಿರುವ ಪದಗಳು ಸಹ ಹಲವಾರು ದಿನಗಳ, ವಾರಗಳ ಅಥವಾ ತಿಂಗಳುಗಳವರೆಗೆ ಸಂಪೂರ್ಣ ಅರಿವಿಗೆ ಬಾರದಿರಬಹುದು. ಅರ್ಥದ ಗಹನತೆ ಪುನಃ ಪುನಃ ಚಿಂತನೆ ನಡೆಸಿದನಂತರ ಸ್ಪಷ್ಟವಾಗುತ್ತದೆ. ”

ಮುಂದಿನ ಬಾರಿ ನೀವು ಪೂಜೆ ಅಥವಾ ಹೋಮಕ್ಕಾಗಿ ದೇವಾಲಯಕ್ಕೆ ಹೋದಾಗ, ದೇವರ ಜೊತೆಗೆ ಪವಿತ್ರವಾದ, ನಿಗೂಢವಾದ ಸಂಪರ್ಕ ದೊರೆಯಲು ಬೇಕಾದ ಸೂಕ್ಷ್ಮ ಮತ್ತು ಸ್ಥೂಲವಾದ ಅನೇಕ ಅಂಶಗಳ ಬಗ್ಗೆ ಚಿಂತನೆ ನಡೆಸಿ.