ಜನಪ್ರಿಯ ಜಾತ್ಯತೀತ ಉದ್ದೇಶಗಳಿಗಾಗಿ ತದೇಕ ಲಕ್ಷ್ಯವನ್ನು ಪುನರ್ ವ್ಯಾಖ್ಯಾನಿಸಲಾಗಿದ್ದರೂ, ಅದರ ಮೂಲ ಆಧ್ಯಾತ್ಮಿಕ ಉದ್ದೇಶ ಮಾತ್ರ ಬದಲಾಗದೆ ಉಳಿದಿದೆ.
English |
Marathi |
Kannada |
Tamil |
Portuguese |
Spanish
Hindi
ಸದ್ಗುರು ಬೋಧಿನಾಥ ವೇಲನ್‍ಸ್ವಾಮಿ
ತದೇಕ ಲಕ್ಷ್ಯ, ಯೋಗ, ಧ್ಯಾನ ಇವುಗಳಲ್ಲಿ ಸಾದೃಶ್ಯವಿದ್ದರೂ, ಅವು ಪ್ರಮುಖ ವ್ಯತ್ಯಾಸಗಳನ್ನು ಹೊಂದಿವೆ, ಕಾಲಕ್ರಮದಲ್ಲಿ ಯೋಗ ಮತ್ತು ಧ್ಯಾನಗಳನ್ನು ಅನುಸರಿಸುವವರು ಹೆಚ್ಚಾಗಿ ಇದ್ದರೂ, ಜನಪ್ರಿಯ ಸಂಸ್ಕೃತಿಯಲ್ಲಿ ತದೇಕ ಲಕ್ಷ್ಯ ಉಚ್ಚ ಸ್ಥಾನವನ್ನು ಪಡೆದಿದೆ. ಗೂಗಲ್ ಹುಡುಕಾಟದಲ್ಲಿ ಯೋಗ 1.2 ಒಂದು ಲಕ್ಷ ಕೋಟಿ ಹಿಟ್, ಧ್ಯಾನ 415 ದಶಲಕ್ಷ ಹಿಟ್ ಮತ್ತು ತದೇಕ ಲಕ್ಷ್ಯ 207 ದಶಲಕ್ಷ ಹಿಟ್ ಗಳನ್ನು ಪಡೆದಿವೆ. ಸಾಮಾನ್ಯವಾಗಿ ತಿಳಿದಿರುವಂತೆ, ಯೋಗವು ಹಿಂದೂ ಧರ್ಮದಲ್ಲಿ ಜನಿಸಿದ್ದು, ಇಂದಿಗೂ ಅದರ ಅವಿಭಾಜ್ಯ ಅಂಗವಾಗಿದೆ. ಆದರೆ ಇಂದಿನ ಜನಪ್ರಿಯ ಸಂಸ್ಕೃತಿಯಲ್ಲಿ ಯೋಗವನ್ನು ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಮತ್ತು ದೈಹಿಕ ಆರೋಗ್ಯಕ್ಕೆ ಸೀಮಿತವಾದ ಜಾತ್ಯತೀತ ಅಭ್ಯಾಸವೆಂದು ಪರಿಗಣಿಸಲಾಗುತ್ತದೆ. ಮೂಲತಃ ಭಾರತದಲ್ಲಿ ರಾಜ ಯೋಗ ಎಂದು ಕರೆಯಲ್ಪಡುವ ಅಷ್ಟಾಂಗ ಕ್ರಮ ಹೆಚ್ಚು ಆಳವಾದ ಆಧ್ಯಾತ್ಮಿಕ ಪಾತ್ರವನ್ನು ಪಡೆದಿತ್ತು ಮತ್ತು ಇಂದಿಗೂ ಪಡೆದಿದೆ. ತದೇಕ ಲಕ್ಷ್ಯ ಇದೇ ಮಾರ್ಗವನ್ನು ಅನುಸರಿಸಿದೆ. ಹಿಂದೂ ಧರ್ಮದಲ್ಲಿ ಮೂಲವನ್ನು ಪಡೆದಿರುವ ತದೇಕ ಲಕ್ಷ್ಯ, ಬೌದ್ಧರ ಧ್ಯಾನದ ಪ್ರಮುಖ ಅಂಶವಾಯಿತು. ಭಾವನಾತ್ಮಕ ನಿರ್ವಹಣೆಗೆ ಬೆಂಬಲ ನೀಡಲು, ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಮತ್ತು ಮನಸ್ಸನ್ನು ಕೇಂದ್ರೀಕರಿಸಲು ಬಳಸಲಾಗುತ್ತಿರುವ ತದೇಕ ಲಕ್ಷ್ಯವನ್ನು ಇಂದಿನ ಪ್ರಚಲಿತ ಪ್ರವೃತ್ತಿಯ ಸಂಸ್ಕೃತಿಯಲ್ಲಿ ಆಧ್ಯಾತ್ಮಿಕವಲ್ಲದ ಅಭ್ಯಾಸವೆಂದು ಹೆಚ್ಚಾಗಿ ಪರಿಗಣಿಸಲಾಗುತ್ತದೆ.
ಭಾವನೆಗಳ ನಿರ್ವಹಣೆ, ಮಾನಸಿಕ ಒತ್ತಡವನ್ನು ಕಡಿಮೆ ಮಾಡುವುದು ಮತ್ತು ಗಮನವನ್ನು ತೀವ್ರವಾಗಿ ಕೇಂದ್ರೀಕರಿಸುವುದು ಕೂಡ ಹಿಂದೂ ಧರ್ಮದ ಪ್ರಮುಖ ಗುರಿಗಳಾಗಿವೆ. ಆದರೆ ಅವು ಪ್ರಾಥಮಿಕ ಹಂತದ ಗುರಿಗಳಾಗಿವೆ. ಸ್ಮೃತಿ ಎನ್ನುವ ಸಂಸ್ಕೃತ ಪದದ ಅರ್ಥ ನೆನಪಿಟ್ಟುಕೊಳ್ಳುವುದು. ಅದು ತದೇಕ ಲಕ್ಷ್ಯ ಕೊಡುವುದರ ಬಗ್ಗೆ, ನಮಗೆ ಅರಿವಿರುವ ಸಂಗತಿಗಳೊಡನೆ ನಮ್ಮ ಹಾಗೂ ನಮ್ಮ ಸಂಬಂಧವನ್ನು ನೆನಪಿಟ್ಟುಕೊಳ್ಳುವುದರ ಮತ್ತು ಅಲ್ಲಿ ಪ್ರಸ್ತುತವಾಗಿರುವುದರ ಬಗ್ಗೆ ಪ್ರಸ್ತಾಪಿಸುತ್ತದೆ. ತದೇಕ ಲಕ್ಷ್ಯ ರಾಜಯೋಗದ ಪೂರ್ವಭಾವಿ ಅಭ್ಯಾಸವಾಗಿದೆ. ಇದು ಪ್ರಜ್ಞೆಯ ಪ್ರಮುಖ ಸ್ಥಿತಿಯನ್ನು ತಲುಪಲು ಬೇಕಾದ ಉನ್ನತ ಸಾಧನೆಯನ್ನು ನಡೆಸಲು ಮಾರ್ಗದರ್ಶನ ಮಾಡುತ್ತದೆ ಮತ್ತು ಅಂತಿಮವಾಗಿ, ನಮ್ಮಅಂತರಾಳದ ಸರ್ವವ್ಯಾಪಿ ಮತ್ತು ಪ್ರೀತಿಯ ಪ್ರಜ್ಞೆಯಾಗಿ ಭಗವಂತನೊಡನೆ ನಮ್ಮ ಮಿಲನವಾಗಲು ಕಾರಣವಾಗುತ್ತದೆ. ಈ ಅತೀಂದ್ರಿಯ ಸ್ಥಿತಿಗಳು ತದೇಕ ಲಕ್ಷ್ಯದ ಇಂದಿನ ಜಾತ್ಯತೀತ ವ್ಯಾಖ್ಯಾನದ ಭಾಗವಲ್ಲ.
ನ್ಯೂಯಾರ್ಕ್ ಟೈಮ್ಸ್ ನ ಏಪ್ರಿಲ್ 5, 2019 ರ ಒಂದು ಲೇಖನ ತದೇಕ ಲಕ್ಷ್ಯದ ಶಿಕ್ಷಣ ತನ್ನ ಹಿಂದೂ ಮನನಶೀಲತೆಯ ಬೇರುಗಳಿಂದ ಎಷ್ಟು ದೂರ ಸರಿದಿದೆ ಎಂಬುದನ್ನು ತೋರಿಸುತ್ತದೆ: “ತದೇಕ ಲಕ್ಷ್ಯವನ್ನು – ಧ್ಯಾನದಲ್ಲಿ ಮಾಡುವಂತೆ ಗಮನವನ್ನು ಕೇಂದ್ರೀಕರಿಸಲು ಮತ್ತು ಚಿತ್ತಚಾಂಚಲ್ಯವನ್ನು ಕಡಿಮೆ ಮಾಡಲು ಉಸಿರಾಟದ ತಂತ್ರಗಳ ಅಭ್ಯಾಸವನ್ನು – ಯುನೈಟೆಡ್ ಸಂಯುಕ್ತ ಸಂಸ್ಥಾನ ಮತ್ತು ಇತರ ಕೆಲವು ರಾಷ್ಟ್ರಗಳ ಸೇನೆಗಳಲ್ಲಿ ಕ್ರಮೇಣ ಬಳಸುತ್ತಿದ್ದಾರೆ. ಈ ಚಳಿಗಾಲದಲ್ಲಿ, ಹವಾಯಿಯ ಸ್ಕಫೀಲ್ಡ್ ಬ್ಯಾರಕ್ಸ್ ಎಂಬಲ್ಲಿ ಸೇನೆಯ ಕಾಲಾಳುಪಡೆಯ ಸೈನಿಕರು ಬಂದೂಕು ಹಾರಿಸುವ ಕೌಶಲ್ಯವನ್ನು ಸುಧಾರಿಸಲು ತದೇಕ ಲಕ್ಷ್ಯವನ್ನು ಬಳಸಲಾರಂಭಿಸಿದರು. ಉದಾಹರಣೆಗೆ, ಅವ್ಯವಸ್ಥೆಯ ನಡುವೆ ಅನಗತ್ಯವಾಗಿ ನಾಗರಿಕರಿಗೆ ಉಂಟಾಗುವ ಹಾನಿಯನ್ನು ತಪ್ಪಿಸಲು ಬಂದೂಕಿನ ಗುಂಡು ಹಾರಿಸುವ ಕಾರ್ಯಾಚರಣೆಯನ್ನು ಯಾವಾಗ ಆರಂಭಿಸಬೇಕು ಎಂಬುದರ ಬಗ್ಗೆ ಅವರು ಗಮನಹರಿಸತೊಡಗಿದರು.” ಲೇಖನವು ತಮ್ಮ ಸೇನೆಗೆ ಈ ತರಬೇತಿಯನ್ನು ನೀಡುತ್ತಿರುವ ಇತರ ಕೆಲವು ದೇಶಗಳನ್ನು ಪಟ್ಟಿ ಮಾಡಿದೆ. ಗಣ್ಯ ಕ್ರೀಡಾಪಟುಗಳಿಗೆ, ಚಲನಚಿತ್ರಗಳ ನಟರಿಗೆ, ಮಿಶೆಲಿನ್ ಮಾರ್ಗದರ್ಶಿ ಗ್ರಂಥದ ಮೆಚ್ಚುಗೆಗೆ ಪಾತ್ರರಾದ ಬಾಣಸಿಗರಿಗೆ ಮತ್ತು ಶಿಶುವಿಹಾರದ ಮೂರು ವರ್ಷದ ಮಕ್ಕಳಿಗೆ ತದೇಕ ಲಕ್ಷ್ಯವನ್ನು ಕಲಿಸಲಾಗುತ್ತಿದೆ. ಸೈನಿಕರಿಗೆ ಶತ್ರುಗಳ ಮೇಲೆ ಉತ್ತಮ ರೀತಿಯಲ್ಲಿ ಬಂದೂಕಿನ ಗುಂಡು ಹಾರಿಸಲು ತರಬೇತಿ ನೀಡುವ ಸಾಧನವಾಗಿ ಈ ಆಧ್ಯಾತ್ಮಿಕ ಶಿಸ್ತನ್ನು ಮರುರೂಪಿಸಲಾಗಿರುವುದು ಮಹಾ ದುರಂತ ಹಾಗೂ ವಿಪರ್ಯಾಸ ಎನ್ನಬಹುದು.
ತದೇಕ ಲಕ್ಷ್ಯವೆಂದರೆ ಏನು? ನೆದರ್ಲ್ಯಾಂಡ್ಸ್ ನ ರಚನಾತ್ಮಕ ಮನೋವಿಜ್ಞಾನ ಯೋಜನೆ, “ತದೇಕ ಲಕ್ಷ್ಯವೆಂದರೆ ಇಲ್ಲಿ ಮತ್ತು ಈಗ ನಡೆಯುತ್ತಿರುವುದರ ಬಗ್ಗೆ ಮನಸ್ಸನ್ನು ಕೇಂದ್ರೀಕರಿಸುವುದು” ಎಂದು ಸಂಕ್ಷಿಪ್ತ ನಿರೂಪಣೆಯನ್ನು ನೀಡುತ್ತದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಅದು ಬೇರೆ ವಿಷಯದ ಬಗ್ಗೆ ನಾವು ಯೋಚಿಸದಂತೆ ಅಥವಾ ಬೇರೆ ವಿಷಯದಿಂದ ನಾವು ವಿಚಲಿತರಾಗದಂತೆ ಮಾಡಿ, ಪ್ರಸ್ತುತ ಕ್ಷಣದಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ನಮ್ಮ ಸಂಪೂರ್ಣ ಗಮನವನ್ನು ಕೇಂದ್ರೀಕರಿಸುತ್ತದೆ. ಉದಾಹರಣೆಗೆ ಅಡುಗೆ ಮಾಡುವುದು ಅಥವಾ ಕಾರನ್ನು ತೊಳೆಯುವುದು ಮುಂತಾದ ಸರಳ ಕೆಲಸಗಳನ್ನು ಮಾಡುವಾಗ, ಮನಸ್ಸು ಸಂಪೂರ್ಣವಾಗಿ ಆ ಕಾರ್ಯದಲ್ಲಿ ಲೀನವಾಗುವಂತೆ ಮಾಡುತ್ತದೆ. ಗೆಳೆಯನೊಬ್ಬ ಅಥವಾ ಗೆಳತಿಯೊಬ್ಬಳು ಹಿಂದಿನ ದಿನ ತಾನು ಮಾಡಿದ ಕೆಲಸದ ಬಗ್ಗೆ ವಿವರಿಸುವಾಗ, ಆ ವೇಳೆಯಲ್ಲಿ ಬೇರೆ ಯಾವುದರ ಬಗ್ಗೆಯೂ ಯೋಚಿಸಲು ಹೋಗದೆ ನಾವು ನಮ್ಮ ಮನಸ್ಸನ್ನು ನೂರಕ್ಕೆ ನೂರರಷ್ಟು ಅದರ ಮೇಲೆಯೇ ಕೇಂದ್ರೀಕರಿಸುತ್ತೇವೆ. ನಾವು ಊಟ ಮಾಡುವಾಗ, ಪ್ರತಿ ಖಾದ್ಯ ನೋಡಲು, ಸ್ಪರ್ಶಿಸಲು ಹೇಗಿದೆ, ಅದರ ರುಚಿ ಹೇಗಿದೆ ಎಂಬುದರ ಕಡೆಗೆ ನಮ್ಮ ಗಮನ ಹರಿಸುತ್ತೇವೆ.
ನನ್ನ ಗುರು ಶಿವಾಯ ಸುಬ್ರಮುನಿಯಸ್ವಾಮಿಯವರ ಬೋಧನೆಗಳಲ್ಲಿ, ರಾಜಯೋಗದ ಪ್ರಗತಿಶೀಲ ಮಾನಸಿಕ ಅಭ್ಯಾಸಗಳ ಮೊದಲ ಹೆಜ್ಜೆ ಲಕ್ಷ್ಯ ಕೊಡುವುದೇ ಆಗಿದೆ. ಇದನ್ನು ಅವರು ಗಮನ ಕೊಡುವುದು, ಏಕಾಗ್ರತೆ, ಧ್ಯಾನ, ಚಿಂತನೆ ಮತ್ತು ಸ್ವಯಂ ಸಾಕ್ಷಾತ್ಕಾರ ಎಂದು ವ್ಯಾಖ್ಯಾನಿಸಿದ್ದಾರೆ. ಗಮನ ಕೊಡುವುದನ್ನು ಅವರು ಅರಿವನ್ನು ಮನಸ್ಸಿನ ಒಂದು ಪ್ರದೇಶದಲ್ಲಿ ಮಾತ್ರ ಕೇಂದ್ರೀಕೃತವಾಗಿರುವಂತೆ ಸ್ಥಿರವಾಗಿ ಹಿಡಿದಿಟ್ಟುಕೊಳ್ಳುವುದು ಎಂದು ವಿವರಿಸಿದ್ದಾರೆ. “ಗಮನ ಕೊಡುವುದೆಂದರೆ ಹೂವೊಂದರ ಮೇಲೆ ಝೇಂಕಾರದ ಹಕ್ಕಿ (ಹಮ್ಮಿಂಗ್ ಬರ್ಡ್)ಯಂತೆ ಯಾವ ಆಧಾರವೂ ಇಲ್ಲದೆ ನಿಂತಿರುವುದು. ಹಕ್ಕಿ ಚಲಿಸುವುದಿಲ್ಲ. ಹೂವು ಕೂಡ ಚಲಿಸುವುದಿಲ್ಲ, ಹಕ್ಕಿಯ ಪ್ರಜ್ಞೆ ಹೂವಿನ ಮೇಲೆ ಝೇಂಕರಿಸುತ್ತ ನಿಲ್ಲುವುದೇ ಆಗಿರುತ್ತದೆ. ನಮ್ಮ ಪ್ರಜ್ಞೆ ಹೂವಿನ ಮೇಲೆ ಝೇಂಕಾರದ ಹಕ್ಕಿಯಂತೆ ಝೇಂಕರಿಸುತ್ತ ನಿಲ್ಲಲು ನಮ್ಮ ಭೌತಿಕ ಶರೀರದ ಸಂಪೂರ್ಣ ನರಮಂಡಲ ಮತ್ತು ಉಸಿರಾಟ ಕ್ರಿಯೆ ಒಂದು ನಿರ್ದಿಷ್ಟ ಲಯದಲ್ಲಿರಬೇಕು. ನಮ್ಮ ಭೌತಿಕ ಶರೀರ ಮತ್ತು ಉಸಿರಾಟ ಯಾವುದೇ ರೀತಿಯ ಶಿಸ್ತಿಗೂ ಬದ್ಧವಾಗಿಲ್ಲವಾದ ಕಾರಣ, ನಾವು ಲಯಬದ್ಧವಾಗಿ ಮತ್ತು ದೀರ್ಘವಾಗಿ ಉಸಿರಾಡಲು ಆರಂಭಿಸಬೇಕು. ಎಂದರೆ ನಾವು ಉಸಿರನ್ನು ಎಳೆದುಕೊಳ್ಳುವಾಗ ತೆಗೆದುಕೊಳ್ಳುವಷ್ಟು ಸಮಯವನ್ನೇ ಉಸಿರನ್ನು ಬಿಡುವಾಗಲೂ ತೆಗೆದುಕೊಳ್ಳಬೇಕು. ಇದನ್ನು ದೀರ್ಘಕಾಲ ಮಾಡಿದ ನಂತರ ನಮ್ಮ ಶರೀರ ತರಬೇತಿ ಪಡೆಯುತ್ತದೆ – ನೀವು ಈಗಲೇ ಇದನ್ನು ಪ್ರಾರಂಭಿಸಬಹುದು. ಈಗ ಬಾಹ್ಯ ನರಮಂಡಲ ತರಬೇತಿ ಪಡೆಯುತ್ತದೆ, ಪ್ರತಿಕ್ರಿಯಿಸುತ್ತದೆ ಮತ್ತು ಪ್ರಜ್ಞೆ ಗಮನ ಕೊಡಲು ಆರಂಭಿಸುತ್ತದೆ.”
ನಮ್ಮ ಪರಿಸರದ ವಿವರವಾದ ವೀಕ್ಷಣೆಯನ್ನು ಒಳಗೊಂಡಿರುವ ತದೇಕ ಲಕ್ಷ್ಯದ ಒಂದು ವ್ಯಾಯಾಮ ಇಲ್ಲಿದೆ. ಸುತ್ತಾಡಿಕೊಂಡು ಬನ್ನಿ. ಸಾಧ್ಯವಾದರೆ ಪ್ರಕೃತಿಯಲ್ಲಿ ನಡೆದಾಡಿ. ನೀವು ನೋಡುವ ಪ್ರತಿಯೊಂದನ್ನೂ ವಿಷದವಾಗಿ ಗಮನಿಸಿ. ಚಿಕ್ಕ ಮಗುವಿನೊಂದಿಗೆ ಸುತ್ತಾಡಿಕೊಂಡು ಬಂದಾಗ, ಆ ಎಳೆಯ ಬಾಲಕ ಅಥವಾ ಬಾಲಕಿ ನೀವು ಗಮನಿಸದ ವಿವರಗಳನ್ನು ಸರಾಗವಾಗಿ ವಿವರಿಸುವ ಅನುಭವ ನಿಮಗೆ ಆಗಿರಬಹುದು. ಚಿಕ್ಕ ಮಕ್ಕಳು ಎಲ್ಲವನ್ನೂ ಗಮನವಿಟ್ಟು ನೋಡುವ ಶಕ್ತಿಯನ್ನು ಹೊಂದಿದ್ದಾರೆ. ಅವರ ಬುದ್ಧಿ ಅತಿಯಾಗಿ ಕಾರ್ಯನಿರ್ವಹಿಸುವುದಿಲ್ಲ ಅಥವಾ ವಯಸ್ಕರಂತೆ ಅವರ ಮನಸ್ಸು ಮತ್ತು ನೆನಪುಗಳು ಬಗೆಹರಿಸಲಾಗದ ಹಿಂದಿನ ಅನುಭವಗಳ ಭಾರವನ್ನು ಹೊತ್ತಿರುವುದಿಲ್ಲ. ಸಾಧ್ಯವಾದಷ್ಟು ವಿವರಗಳನ್ನು ಗಮನಿಸುವುದರ ಮೂಲಕ ನಾವು ಮಕ್ಕಳಂತೆ ಇರಲು ಪ್ರಯತ್ನಿಸಬಹುದು.
ಧ್ಯಾನದ ಯಶಸ್ಸಿಗೆ ತದೇಕ ಲಕ್ಷ್ಯದ ಅಭ್ಯಾಸ ಅವಿಭಾಜ್ಯ ಅಂಗವಾಗಿದೆ. ಆಲೋಚನೆಗಳು ಎಲ್ಲೆಡೆಯೂ ಹೋಗುವುದು ಆರಂಭಿಕ ಧ್ಯಾನಸ್ಥರ ಸಾಮಾನ್ಯ ಅನುಭವ. ಅವರಿಗೆ ಆ ಆಲೋಚನೆಗಳನ್ನು ಹತ್ತಿಕ್ಕಲು ಸಾಧ್ಯವಾಗುವುದಿಲ್ಲ. ಆದ್ದರಿಂದ, ಧ್ಯಾನವನ್ನು ಶಾಂತ ಕೊಳವೆಂದು ಹೇಳುವ ಬದಲು, ಬಿರುಗಾಳಿಯ ಸಮುದ್ರವೆನ್ನಬಹುದು. ನಮ್ಮ ಆಲೋಚನೆಗಳನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಸ್ನಾಯುವನ್ನು ಬಳಸುವುದರೊಡನೆ ಹೋಲಿಸಬಹುದು. ಸ್ನಾಯು ಬಲಶಾಲಿಯಾಗಲು ನಿಯಮಿತವಾಗಿ ವ್ಯಾಯಾಮ ಮಾಡುವ ಅಗತ್ಯವಿದೆ. ನಾವು ಅದನ್ನು ಎಷ್ಟು ಹೆಚ್ಚು ಬಳಸುತ್ತೇವೋ, ಅದು ಅಷ್ಟೇ ಬಲಗೊಳ್ಳುತ್ತದೆ. ಮನಸ್ಸನ್ನು ನಿಯಂತ್ರಿಸುವ ಸಾಮರ್ಥ್ಯವೂ ಹಾಗೆಯೇ. ನಾವು ನಮ್ಮ ಆಲೋಚನೆಗಳನ್ನು ಹೆಚ್ಚು ನಿಯಂತ್ರಿಸಿದಷ್ಟೂ, ಹಾಗೆ ಮಾಡುವ ನಮ್ಮ ಸಾಮರ್ಥ್ಯವು ಬಲವಾಗುತ್ತದೆ. ಸಾಮಾನ್ಯ ದೈನಂದಿನ ಚಟುವಟಿಕೆಗಳ ಸಮಯದಲ್ಲಿ, ಉದಾಹರಣೆಗೆ ದಿನಕ್ಕೆ ಎಂಟು ಗಂಟೆಗಳ ಕಾಲ ನಾವು ನಮ್ಮ ಆಲೋಚನೆಗಳನ್ನು ನಿಯಂತ್ರಿಸಬಹುದಾದರೆ, ನಾವು ಮೂವತ್ತು ನಿಮಿಷಗಳ ಧ್ಯಾನದ ಸಮಯದಲ್ಲಿ ಮಾಡುವದಕ್ಕಿಂತ ಹೆಚ್ಚಿನ ಪ್ರಯತ್ನವನ್ನು ಮಾಡಿದಂತಾಗುತ್ತದೆ. ಹದಿನಾರು ಪಟ್ಟು ಹೆಚ್ಚಿನ ಅಭ್ಯಾಸ. ನಮ್ಮ ಆಲೋಚನೆಗಳನ್ನು ಸಮರ್ಥವಾಗಿ ನಿಯಂತ್ರಿಸುವ ವೇಗವನ್ನು ಇದು ಖಂಡಿತವಾಗಿ ಹೆಚ್ಚಿಸುತ್ತದೆ!
ಪ್ರಸ್ತುತ ಕ್ಷಣವನ್ನು ವಿವರಿಸಲು ತದೇಕ ಲಕ್ಷ್ಯದ ನಮ್ಮ ವ್ಯಾಖ್ಯಾನ “ಇಲ್ಲಿ ಮತ್ತು ಈಗ” ಎಂಬ ಪದಗಳನ್ನು ಬಳಸುತ್ತದೆ. ಅದೇ ರೀತಿ ಭೂತಕಾಲವನ್ನು “ಅಲ್ಲಿ ಮತ್ತು ಆಗ” ಎಂದು, ಮತ್ತು ಭವಿಷ್ಯವನ್ನು “ಎಲ್ಲಿ ಮತ್ತು ಯಾವಾಗ” ಎಂದು ವಿವರಿಸಬಹುದು. ಭೂತಕಾಲ ಮತ್ತು ಭವಿಷ್ಯದ ಬಗ್ಗೆ ಯೋಚಿಸುತ್ತ ಬಹಳ ಸಮಯವನ್ನು ಕಳೆಯುವುದು ಅನೇಕ ಜನರ ಅಭ್ಯಾಸವಾಗಿದೆ. ಆ ಆಲೋಚನೆಗಳಿಂದ ಯಾವುದೇ ಪ್ರಯೋಜನವೂ ಉಂಟಾಗುವುದಿಲ್ಲ. “ಅಲ್ಲಿ ಮತ್ತು ಆಗ” ಮತ್ತು “ಎಲ್ಲಿ ಮತ್ತು ಯಾವಾಗ”ಗಳ ಬಗ್ಗೆ ಚಿಂತಿಸುವುದು ಮಾನಸಿಕ ಶಕ್ತಿಯ ಅಪವ್ಯಯ ಮಾತ್ರವಲ್ಲ, ಅವು ನಮ್ಮ ಚಿಂತೆ ಮತ್ತು ಮಾನಸಿಕ ಒತ್ತಡವನ್ನೂ ಹೆಚ್ಚಿಸುತ್ತದೆ. ಅಂತಹ ಆಲೋಚನೆಗಳು ನಾವು “ಇಲ್ಲಿ ಮತ್ತು ಈಗ”ದಲ್ಲಿ ಇರಲು ಪ್ರತಿಕೂಲವಾಗಿವೆ.
ಭೂತ ಮತ್ತು ಭವಿಷ್ಯದತ್ತ ಹಿಗ್ಗಾಮುಗ್ಗ ಎಳೆದಾಡುವುದನ್ನು ಕಡಿಮೆ ಮಾಡಲು ಗುರುದೇವರು ಉಪಯುಕ್ತವಾದ ಅಭ್ಯಾಸವನ್ನು ಸೂಚಿಸಿದ್ದಾರೆ: “ನೀವು ಪ್ರತಿದಿನ ನಿಮ್ಮೊಡನೆಯೇ ಸ್ವಲ್ಪ ಹೊತ್ತು ಕೆಲಸ ಮಾಡುತ್ತಾ ಪ್ರತಿ ಕ್ಷಣ ನೀವು ಏನು ಮಾಡುತ್ತಿದ್ದೀರಿ ಎಂಬುದರ ಬಗ್ಗೆ ಗಮನಹರಿಸಿದರೆ ವರ್ತಮಾನದಲ್ಲಿ ಬದುಕುವುದು ಸುಲಭ. ಶಾಶ್ವತವಾಗಿ ವರ್ತಮಾನದಲ್ಲಿಯೇ ಉಳಿಯಲು, ನಾಲ್ಕು ದಿನಗಳಿಗಿಂತ ಮೊದಲು ನಡೆದ ಅಥವಾ ಭವಿಷ್ಯದಲ್ಲಿ ನಾಲ್ಕು ದಿನಗಳನಂತರ ಸಂಭವಿಸಬಹುದಾದ ಘಟನೆಗಳ ಬಗ್ಗೆ ಯೋಚಿಸುವ ಅಥವಾ ಚರ್ಚಿಸುವ ಸಮಯ ಮತ್ತು ಸ್ಥಳವನ್ನು ಮಿತಿಗೊಳಿಸಿ. ಇದು ಪ್ರಜ್ಞೆಯನ್ನು ನಿಯಂತ್ರಿಸಿ ಇಡುತ್ತದೆ, ಕೇಂದ್ರೀಕರಿಸುತ್ತದೆ. ಪ್ರಜ್ಞಾವಂತರಾಗಿರಿ! ‘ನನ್ನ ಬಗ್ಗೆ ಮತ್ತು ನಾನು ಈಗ ಏನು ಮಾಡುತ್ತಿದ್ದೇನೆ ಎಂಬುದರ ಅರಿವು ನನಗೆ ಇದೆಯೇ?” ಎಂದು ನಿಮ್ಮನ್ನೇ ಕೇಳಿಕೊಳ್ಳಿ,
ಅವರು ವ್ಯಾಯಾಮವನ್ನು ಮತ್ತೊಂದು ಹೆಜ್ಜೆ ಮುಂದಕ್ಕೆ ತೆಗೆದುಕೊಂಡು ಹೋಗುತ್ತಾರೆ. “ನೀವು ಈ ರೀತಿ ಪ್ರಜ್ಞೆಯ ಮೇಲೆ ಸ್ವಲ್ಪ ನಿಯಂತ್ರಣ ಸಾಧಿಸಿದ ನಂತರ, ಪ್ರತಿದಿನ ನಿಶ್ಚಲವಾಗಿ ಕುಳಿತುಕೊಳ್ಳಲು ಪ್ರಯತ್ನಿಸಿ. ಏನನ್ನೂ ಯೋಚಿಸಬೇಡಿ, ಏನನ್ನೂ ಯೋಜಿಸಬೇಡಿ. ನೆನಪು ಮಾಡಿಕೊಳ್ಳಬೇಡಿ. ಸುಮ್ಮನೆ ಕುಳಿತು ವರ್ತಮಾನದಲ್ಲಿ ಇರಲು ಪ್ರಯತ್ನಿಸಿ. ಅದು ನೀವು ತಿಳಿದಷ್ಟು ಸರಳವಲ್ಲ, ಏಕೆಂದರೆ ನಮ್ಮ ಮನಸ್ಸು ಹೊಸತನ ಮತ್ತು ನಿರಂತರ ಚಟುವಟಿಕೆಗೆ ಒಗ್ಗಿಕೊಂಡಿದೆ; ನಿಶ್ಚಲತೆಗೆ ಅಲ್ಲ. ಸುಮ್ಮನೆ ಕುಳಿತುಕೊಂಡು ನಿಮ್ಮ ಬೆನ್ನುಮೂಳೆ ಮತ್ತು ತಲೆಯಲ್ಲಿನ ಚೈತನ್ಯವಾಗಿ… ನಿನ್ನೆ ಅಥವಾ ನಾಳೆಯ ಬಗ್ಗೆ ಯೋಚಿಸಬೇಡಿ. ಕಳೆದು ಹೋದ ಕಾಲವನ್ನು ಪುನರ್ ನಿರ್ಮಾಣ ಮಾಡುವ ಮತ್ತು ನಾಳೆಗಳನ್ನು ರಚಿಸುವ ನಿಮ್ಮ ಸಾಮರ್ಥ್ಯದಲ್ಲಿ ಬಿಟ್ಟರೆ ಬೇರೆಲ್ಲೂ ಅವು ಅಸ್ತಿತ್ವದಲ್ಲಿಲ್ಲ. ಈಗಿರುವುದು ವರ್ತಮಾನ ಒಂದೇ . ”
ಪ್ರಸ್ತುತ ಕ್ಷಣದಲ್ಲಿ ನಿಶ್ಚಲವಾಗಿ ಕುಳಿತುಕೊಳ್ಳುವುದರಿಂದ ನಾವು ನಮ್ಮ ಸ್ವಭಾವದ ಅಂತರಾಳವಾದ ಅಂತಃಪ್ರಜ್ಞೆಯೊಡನೆ ಸಾಮರಸ್ಯವನ್ನು ಹೊಂದಬಹುದು. ಅಂತಹ ಪ್ರಶಾಂತ ಕ್ಷಣಗಳಲ್ಲಿ, ನಾವು ನಮ್ಮ ಬದುಕಿನ ಮತ್ತು ಇತರರ ಬದುಕಿನ ವಿನ್ಯಾಸಗಳನ್ನು ಸ್ಪಷ್ಟವಾಗಿ ಕಾಣುವಂತಹ ಸಾಕ್ಷಾತ್ಕಾರದ ಒಳನೋಟಗಳನ್ನು ಹೊಂದಬಹುದು. ಉದಾಹರಣೆಗೆ, ಹೊಸ ಯೋಜನೆಯನ್ನು ಕೈಗೆತ್ತಿಕೊಳ್ಳುವಾಗ ನಾವು ಬಹಳ ಉತ್ಸಾಹದಿಂದಿರುತ್ತೇವೆ, ಆದರೆ ಮೊದಲ ಪ್ರಮುಖ ಅಡಚಣೆಯನ್ನು ಎದುರಿಸಿದ ತಕ್ಷಣ ನಾವು ನಿಷೇಧಾತ್ಮಕವಾಗಿ, ಕೈಯಲ್ಲಾಗುವುದಿಲ್ಲ ಎಂದು ಬಿಟ್ಟುಬಿಡುತ್ತೇವೆ. ಈ ಒಳನೋಟವನ್ನು ಪಡೆದು, ನಾವು ಅಡೆತಡೆಗಳನ್ನು ಎದುರಿಸಿದಾಗ, ಸತತ ಪ್ರಯತ್ನ ಮಾಡುವ ನೂತನ ಅಭ್ಯಾಸವನ್ನು ಸೃಷ್ಟಿಸಿಕೊಳ್ಳಬಹುದು. ನಿಶ್ಚಲವಾಗಿ ಕುಳಿತುಕೊಂಡು, ನಮ್ಮ ಅಂತರ್ಬೋಧೆ ಅಥವಾ ಆತ್ಮದ ಸ್ವಭಾವದೊಡನೆ ಸಂಪರ್ಕ ಸ್ಥಾಪಿಸಿಕೊಳ್ಳುವುದರಿಂದ, ಮನಸ್ಸಿನಲ್ಲಿ ಶಾಂತಿಯನ್ನು ಅನುಭವಿಸಬಹುದು; ಬದುಕಿನಲ್ಲಿ ಪ್ರಸ್ತುತ ಅನುಭವಗಳನ್ನು ಅಂಗೀಕರಿಸುವ ನಮ್ಮ ಪರಿಸ್ಥಿತಿಯನ್ನು ಸಂತೃಪ್ತಿಯಿಂದ ಅನುಭವಿಸುವ ಲಾಭವನ್ನೂ ಹೊಂದಬಹುದು. ಭೂತಕಾಲದಿಂದ ಮುಕ್ತವಾಗಿ, ಭವಿಷ್ಯದಿಂದ ಕ್ಷೋಭೆಗೊಳ್ಳದೆ, ನಾವು ಸುಭದ್ರ, ಚಿರಂತನ ವರ್ತಮಾನದಲ್ಲಿ ವಾಸಿಸಬಹುದು.
ಪತಂಜಲಿ ಮಹರ್ಷಿ ತಮ್ಮ ಯೋಗ ಸೂತ್ರದಲ್ಲಿ ಯೋಗವನ್ನು ಮಾನಸಿಕ ಚಟುವಟಿಕೆಗಳ ಪ್ರತಿಬಂಧಕ ಎಂದು ವ್ಯಾಖ್ಯಾನಿಸಿದ್ದಾರೆ. ಯೋಗವನ್ನು ಸಾಮಾನ್ಯವಾಗಿ ಧ್ಯಾನದ ಸಮಯದಲ್ಲಿ ಮಾತ್ರ ಅನ್ವಯಿಸುವ ಶಿಸ್ತು ಎಂದು ಭಾವಿಸಲಾಗುತ್ತದೆ. ತದೇಕ ಲಕ್ಷ್ಯದ ಸಾಂಪ್ರದಾಯಿಕ ಹಿಂದೂ ಪರಿಕಲ್ಪನೆ ಅದನ್ನು ವಿಸ್ತರಿಸಿ, ನಮ್ಮ ದೈನಂದಿನ ಕಾರ್ಯಕ್ರಮಗಳಲ್ಲಿ ಮನಸ್ಸನ್ನು ನಿಗ್ರಹಿಸುವುದನ್ನು ಅದಕ್ಕೆ ಸೇರಿಸುತ್ತದೆ. ತದೇಕ ಲಕ್ಷ್ಯವನ್ನು ನಾವು ಹೆಚ್ಚಾಗಿ ಬಳಸಿದಂತೆ, ಧ್ಯಾನದ ಸಮಯದಲ್ಲಿ ಮನಸ್ಸನ್ನು ಶಾಂತಗೊಳಿಸುವುದು ಸುಲಭವಾಗುತ್ತದೆ. ಅದು ನಮ್ಮಆತ್ಮದ ಸ್ವಭಾವದೊಡನೆ ಗಹನವಾದ ಅನುಭವಗಳನ್ನು ಪಡೆಯಲು ಕಾರಣವಾಗುತ್ತದೆ.